ನವದೆಹಲಿ: ಗೋವಾದಲ್ಲಿ 2022ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಆಸ್ತಿಗಳ ಮೇಲೆ ಅಕ್ರಮವಾಗಿ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಗೋವಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಪದವಿ ಮಾಹಿತಿ ನೀಡಲು ಹೇಳಿದ್ದ ಆದೇಶ ರದ್ದು: ಕೇಜ್ರಿವಾಲ್ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಗೋವಾದ ಪೆರ್ನೆಮ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ್‌ಕುಮಾರ್ ಹಲರ್ಂಕರ್ ಅವರು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 (ಎ) ಅಡಿಯಲ್ಲಿ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪೊಲೀಸರ ಮುಂದೆ ಹಾಜರಾಗಲು ತಾನು ಖಂಡಿತವಾಗಿಯೂ ಗೋವಾಕ್ಕೆ ಹೋಗುತ್ತೇನೆ ಎಂದು ಹೇಳಿದರು.
2022ರಲ್ಲಿ ನಡೆದ 40 ಸದಸ್ಯರ ಬಲದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡಿತ್ತು. ಇದರಲ್ಲಿ ಎರಡು ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸಿದೆ. 20 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಆಡಳಿತದಲ್ಲಿದ್ದು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನ 10 ಶಾಸಕರು ಸೇರಿ ಒಟ್ಟು 12 ಜನ ಶಾಸಕರು ಬಿಜೆಪಿಯೊಂದಿಗೆ ವಿಲೀನವಾಗಿದ್ದಾರೆ.
ತಪ್ಪು ದಾರಿಗೆಳೆಯುತ್ತಿದೆ ಇಡಿ - ಕೇಜ್ರಿವಾಲ್ ಕಿಡಿ: ಇದೇ ವೇಳೆ ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿ ಕಾಡಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸುಳ್ಳು ಸಾಕ್ಷ್ಯಗಳೊಂದಿಗೆ ನ್ಯಾಯಾಲಯವನ್ನು ''ತಪ್ಪು ದಾರಿಗೆಳೆಯುತ್ತಿದೆ'' ಎಂದು ಆರೋಪಿಸಿದ್ದಾರೆ.
ಜನರಿಗೆ ಚಿತ್ರಹಿಂಸೆ ನೀಡಿ ಒತ್ತಡ ಹೇರುವ ಮೂಲಕ ಇಡಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಸಂಜಯ್ ಸಿಂಗ್ ಪ್ರಕರಣದಲ್ಲೂ ಆರೋಪಿಗಳು ವಿಭಿನ್ನ ಹೇಳಿಕೆ ನೀಡಿದ್ದು, ಚಾರ್ಜ್ಶೀಟ್ನಲ್ಲಿ ಇಡಿ ಇನ್ನೇನೋ ಬರೆದಿರುವುದು ಬೆಳಕಿಗೆ ಬಂದಿದೆ ಎಂದು ಕೇಜ್ರಿವಾಲ್ ದೂರಿದರು. ಜೊತೆಗೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಇಡಿ ಆರೋಪದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸಿಸೋಡಿಯಾ ಅವರ ಫೋನ್‌ಗಳನ್ನು ಒಡೆದಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಆದರೆ, ಅವುಗಳಲ್ಲಿ ಹಲವು ಫೋನ್‌ಗಳು ಏಜೆನ್ಸಿಯ ವಶದಲ್ಲಿವೆ ಎಂದು ಹೇಳಿದರು.
ಇಡಿ ಸುಳ್ಳು ಸಾಕ್ಷ್ಯಗಳೊಂದಿಗೆ ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿದೆ. ಜನರಿಗೆ ಚಿತ್ರಹಿಂಸೆ ನೀಡುತ್ತಿದೆ, ಸುಳ್ಳು ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಂಪೂರ್ಣ ವಿಷಯದಲ್ಲಿ ಏನೂ ಇಲ್ಲ. ಇಡೀ ವಿಷಯವು ಕಟ್ಟುಕಥೆಯಾಗಿದೆ ಮತ್ತು ಸುಳ್ಳು ಸಾಕ್ಷ್ಯವನ್ನು ಆಧರಿಸಿದೆ. ಇದು ಒಳ್ಳೆಯದಲ್ಲ ಎಂದು ಕೇಜ್ರಿವಾಲ್ ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ:ದೇಶದಲ್ಲಿ 60 ಸಾವಿರ ಸರ್ಕಾರಿ ಶಾಲೆ ಮುಚ್ಚಲಾಗಿದೆ ಯಾಕೆ?... ಮೋದಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ: ಜೈಲಿನಿಂದ ಸಿಸೋಡಿಯಾ ಪತ್ರ