ಚೆನ್ನೈ: 2021 ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡು ಮಾಜಿ ಸಿಎಂ ದಿ.ಕರುಣಾನಿಧಿ ಅವರ ಪುತ್ರ ಎಂ.ಕೆ.ಅಳಗಿರಿ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವಿಚಾರ ಸಂಬಂಧ ಸ್ವತಃ ಅಳಗಿರಿಯವರೇ ಪ್ರತಿಕ್ರಿಯಿಸಿದ್ದಾರೆ.
ಬೆಂಬಲಿಗರೊಂದಿಗೆ ಚರ್ಚಿಸಿ, ನಿರ್ಧಾರ ಪ್ರಕಟಿಸುತ್ತೇನೆ: ಎಂ.ಕೆ.ಅಳಗಿರಿ - ಎಂ.ಕೆ.ಅಳಗಿರಿ ರಾಜಕೀಯ ಪ್ರವೇಶಿಸುವ ವಿಚಾರ ಕುರಿತು ಸ್ಪಷ್ಟನೆ
ತಮಿಳುನಾಡು ಮಾಜಿ ಸಿಎಂ ದಿ.ಕರುಣಾನಿಧಿ ಅವರ ಪುತ್ರ ಹಾಗೂ ಎಂ. ಕೆ. ಸ್ಟಾಲಿನ್ ಹಿರಿಯ ಸಹೋದರ ಎಂ.ಕೆ.ಅಳಗಿರಿ, ತಾವು ರಾಜಕೀಯ ಪ್ರವೇಶಿಸುವ ಕುರಿತಂತೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯಕ್ಕೆ ಬರುವ ಕುರಿತಂತೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ, ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್, ನಾನು ಅಧಿಕೃತವಾಗಿ ಈ ಕುರಿತು ಅಳಗಿರಿಯವರೊಂದಿಗೆ ಯಾವುದೇ ಸಂವಹನ ನಡೆಸಿಲ್ಲ, ಅನೇಕರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಅವರೂ ನಮ್ಮ ಪಕ್ಷ ಸೇರಿದ್ರೆ ಅವರನ್ನು ಸ್ವಾಗತಿಸಲು ನಾವು ಸಿದ್ದರಿದ್ದೇವೆ" ಎಂದು ಇಂದು ಹೇಳಿದರು .
ಮುರುಗನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಳಗಿರಿ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್ ಮುರುಗನ್ ಹೀಗೆ ಹೇಳಿದ್ದು, ನನಗೆ ಸಂತೋಷವಾಗಿದೆ. ಆದರೆ, ಬಿಜೆಪಿ ಸೇರುವ ಬಗ್ಗೆ ನಾನಿನ್ನೂ ಯೋಚಿಸಿಲ್ಲ, ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಆ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.. ಇನ್ನು ಇದೇ 21 ರಂದು ಯಾವುದೇ ರಾಜಕೀಯ ಕಾರ್ಯತಂತ್ರ ಸಭೆ ಇಲ್ಲ, ಅವೆಲ್ಲಾ ವದಂತಿಗಳು ಎಂದು ಎಂ.ಕೆ ಅಳಗಿರಿ ಸ್ಪಷ್ಟೀಕರಣ ನೀಡಿದ್ರು.