ಡೆಹ್ರಾಡೂನ್(ಉತ್ತರಾಖಂಡ):ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 47 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಪಡೆದಿದೆ. ಆದರೆ, 2012ರಿಂದಲೂ ರಾಜ್ಯದಲ್ಲಿ ಹಾಲಿ ಸಿಎಂಗಳಿಗೆ ಸೋಲಿನ ಸರಪಳಿ ಎಂಬ ಪಟ್ಟಿಗೆ ಇದೀಗ ಪುಷ್ಕರ್ ಸಿಂಗ್ ಧಾಮಿಯೂ ಹೊರತಾಗಿಲ್ಲ ಅನ್ನೋದೇ ವಿಶೇಷ!.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ನಾಯಕತ್ವದಲ್ಲಿ ಬಿಜೆಪಿ 70 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಹಾಲಿ ಸಿಎಂಗಳಿಗೆ ಸೋಲಾಗುತ್ತದೆ ಎಂಬ ವಿಶೇಷ ನಂಬಿಕೆಯಿಂದ ಪುಷ್ಕರ್ ಸಿಂಗ್ ಧಾಮಿ ಕೂಡಾ ಹೊರಬರಲಿಲ್ಲ.
2012ರಿಂದಲೂ ಉತ್ತರಾಖಂಡದಲ್ಲಿ ನಿರ್ಗಮಿತ ಮುಖ್ಯಮಂತ್ರಿ ಗೆಲುವು ಸಾಧಿಸಿರುವ ಉದಾಹರಣೆಯೇ ಇಲ್ಲವೆನ್ನಬಹುದು. ಈ ಪಟ್ಟಿಯಿಂದ ಪುಷ್ಕರ್ ಸಿಂಗ್ ಧಾಮಿ ಹೊರಬರಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಅವರು ಸೋಲು ಕಂಡಿದ್ದಾರೆ. ಈ ಹಿಂದೆ 2002ರಲ್ಲಿ ಇಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು. ತದನಂತರ 2007ರಲ್ಲಿ ಬಿಜೆಪಿ, 2012ರಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇದೀಗ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿದೆ. ಆದರೆ, ಮುಖ್ಯಮಂತ್ರಿ ಮಾತ್ರ ಸೋಲುಂಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವರ ಪುತ್ರನ ಕಾರು ಹರಿದು ಹಿಂಸಾಚಾರಕ್ಕೆ ಕಾರಣವಾದ ಲಖೀಂಪುರದಲ್ಲಿ ಎಲ್ಲ ಕ್ಷೇತ್ರ ಗೆದ್ದ ಬಿಜೆಪಿ!
2012ರಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಸಿಎಂ ಭುವನಚಂದ್ರ ಖಂಡುಡಿ ಸೋಲು ಅನುಭವಿಸಿದ್ದರು. 2017ರಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹರೀಶ್ ರಾವತ್ ಅವರೂ ಗೆಲುವು ಸಾಧಿಸಲು ವಿಫಲರಾಗಿದ್ದರು. ಇದೀಗ ಖತೀಮಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೂ ಕೂಡ ಸೋಲಾಗಿದೆ.