ತಿರುವಣ್ಣಾಮಲೈ (ತಮಿಳುನಾಡು): ತನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಜನರ ಗುಂಪು ಥಳಿಸಿದೆ ಎಂದು ತಮಿಳುನಾಡಿನ ಯೋಧರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಮೂಲದ ಯೋಧ ಪ್ರಭಾಕರನ್ ಎಂಬುವವರು ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮೂರಲ್ಲಿ ತನ್ನ ಪತ್ನಿಗೆ ಥಳಿಸಲಾಗಿದೆ ಎಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ನಾಗಪಟ್ಟಣಂ ಜಿಲ್ಲೆಯ ಕಡವಾಸಲ್ ಗ್ರಾಮದಲ್ಲಿ ನನ್ನ ಹೆಂಡತಿ ಜೀವನೋಪಾಯಕ್ಕಾಗಿ ಸ್ಥಳವೊಂದರಲ್ಲಿ ಅಂಗಡಿಯನ್ನು ನಡೆಸುತ್ತಾಳೆ. ಆಕೆಯನ್ನು 120 ಮಂದಿ ಥಳಿಸಿ ಅಂಗಡಿಯ ವಸ್ತುಗಳನ್ನು ಹೊರಹಾಕಿದ್ದಾರೆ. ನಾನು ಎಸ್ಪಿಗೆ ಮನವಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಡಿಜಿಪಿ ಸರ್ ದಯವಿಟ್ಟು ಸಹಾಯ ಮಾಡಿ. ನನ್ನ ಮನೆಯವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಬೆದರಿಸಿದ್ದಾರೆ. ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಯೋಧ ಪ್ರಭಾಕರನ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋವನ್ನು ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಪೊಲೀಸರು ಹೇಳಿದ್ದೇನು?:ಯೋಧ ಪ್ರಭಾಕರನ್ ಆರೋಪದ ಬಗ್ಗೆ ತಿರುವಣ್ಣಾಮಲೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್, ಇದು ರೇಣುಕಾಂಬಲ್ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಗುತ್ತಿಗೆ ಪಡೆದ ಅಂಗಡಿಯೊಂದರ ವಿವಾದವಾಗಿದೆ. ಕೀರ್ತಿ ಎಂಬ ಮಹಿಳೆ ಮೇಲೆ ಹಲ್ಲೆ ನಡೆದಿಲ್ಲ. ನಿನ್ನೆ ಘಟನೆ ನಡೆದಾಗ ಕೀರ್ತಿ ಮತ್ತು ಆಕೆಯ ತಾಯಿ ಸ್ಥಳದಲ್ಲಿಯೇ ಇದ್ದರು. ಆದರೆ, ಈ ಸಮಸ್ಯೆಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.