ಪಾಣಿಪತ್ (ಹರಿಯಾಣ): ಪತಿ-ಪತ್ನಿಯರ ಮಧ್ಯೆ ಏನೇನೋ ಕಾರಣಕ್ಕೆ ಜಗಳಗಳು ನಡೆಯುತ್ತವೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಪತಿಗೆ ಹೆಚ್ಐವಿ ಸೋಂಕು ತಗುಲಿದೆ. ಆದರೂ, ಆತ ತನ್ನೊಂದಿಗೆ ಇರಲು ಬಯಸುತ್ತಿದ್ದಾನೆ. ದಿನವೂ ಹಲ್ಲೆ ಮಾಡುತ್ತಾನೆ. ಈತನಿಂದ ನನ್ನನ್ನು ರಕ್ಷಿಸಿ ಎಂದು ಆರೋಪಿಸಿ ಮಹಿಳೆ ಗಂಡನ ವಿರುದ್ಧ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ವಿವರ: "2009ರಲ್ಲಿ ನನಗೆ ಪ್ರೇಮ ವಿವಾಹವಾಗಿದೆ. ಅಂಬಾಲದಲ್ಲಿ ಓದುತ್ತಿದ್ದು ಅಲ್ಲಿಯೇ ಇದ್ದ ಮೊಬೈಲ್ ಅಂಗಡಿಯ ನಿರ್ವಾಹಕನ ಜೊತೆ ಸ್ನೇಹ ಬೆಳೆಸಿಕೊಂಡೆ. ಬಳಿಕ ಇಬ್ಬರೂ ಮದುವೆಯಾದೆವು. ಮದುವೆಯ ನಂತರ, ಪತಿ ಫಿಟ್ನೆಸ್ ಕೇಂದ್ರವನ್ನು ತೆರೆದರು. ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. 2018 ರಲ್ಲಿ ಪತಿ ನಿರಂತರವಾಗಿ ದುರ್ಬಲವಾಗುತ್ತಾ ಸಾಗಿದ. ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಯಿತು. ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಇತ್ತು."
"ಫಿಟ್ನೆಸ್ ಕೇಂದ್ರ ನಡೆಸುತ್ತಿರುವ ಆತನಿಗೆ ಮಾರಕ ಹೆಚ್ಐವಿ ಸೋಂಕು ಹರಡಿದೆ. ಇದರಿಂದ ದೈಹಿಕವಾಗಿ ಕೃಶನಾಗಿದ್ದಾನೆ. ತಪಾಸಣಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದಾದ ಬಳಿಕ ಇಬ್ಬರೂ ದೂರವಿದ್ದೇವೆ. ಆದರೆ, ಕಾಲಕ್ರಮೇಣ ನನ್ನ ಮೇಲೆ ಅನುಮಾನಪಡುತ್ತಿದ್ದಾನೆ. ಪದೇ ಪದೇ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾನೆ. ಹೆಚ್ಐವಿ ಸೋಂಕನ್ನು ನನಗೆ ಹರಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ."
"ನಿತ್ಯವೂ ತನ್ನ ಮೇಲೆ ಹಲ್ಲೆ ಮಾಡುತ್ತಾನೆ. ಇದೇ ಕಾರಣಕ್ಕಾಗಿ ಈ ಹಿಂದೆ ಪಂಚಾಯ್ತಿ ನಡೆಸಲಾಗಿತ್ತು. ಆತ ತನ್ನ ತಪ್ಪನ್ನು ಅರಿತು ಕ್ಷಮೆಯಾಚಿಸಿದ್ದ. ಆದರೆ, ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದು, ಹಲ್ಲೆ ನಡೆಸುತ್ತಿದ್ದಾನೆ. ದಿನನಿತ್ಯವೂ ಹೊಡೆಯುತ್ತಾನೆ. ನನಗೆ ಆತನಿಂದ ರಕ್ಷಣೆ ಕೊಡಿ" ಎಂದು ಮನವಿ ಮಾಡಿದ್ದಾರೆ.