ಬರೇಲಿ(ಉತ್ತರ ಪ್ರದೇಶ):ಉತ್ತರ ಭಾರತದಲ್ಲಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಮಾಡುವ ಮೂಲಕ ಪತಿಯ ದೀರ್ಘಾಯುಷ್ಯಕ್ಕಾಗಿ 'ಕರ್ವಾ ಚೌತ್' ಎಂಬ ಹಬ್ಬವನ್ನು ನವ ವಿವಾಹಿತೆಯರು ಆಚರಿಸುವ ಪದ್ಧತಿ ಇದೆ. ಇಂತಹ ವಿಶೇಷ ಹಬ್ಬಕ್ಕೆ ತವರಿಗೆ ಹೋಗಿದ್ದ ಪತ್ನಿ ಮರಳಿ ಬಾರದೇ ಇದ್ದುದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಗುಗಾ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.
ಪ್ರಮೋದ್ ಕುಮಾರ್ (24) ಆತ್ಮಹತ್ಯೆಗೆ ಶರಣಾದವರು. ಎರಡು ತಿಂಗಳ ಹಿಂದೆ ಪ್ರಮೋದ್ ಅವರ ಪತ್ನಿ ಪ್ರೀತಿ ತನ್ನ ತಾಯಿಯ ಮನೆಗೆ ಹೋಗಿದ್ದರು. ಬಳಿಕ ಮರಳಿ ಗಂಡನ ಮನೆಗೆ ಬಂದಿರಲಿಲ್ಲ. ಬುಧವಾರ ಕರ್ವಾ ಚೌತ್ ಹಬ್ಬಕ್ಕೆ ಹೆಂಡತಿಯನ್ನು ಮನೆಗೆ ಕಳುಹಿಸುವಂತೆ ತನ್ನ ಅತ್ತೆಯೊಂದಿಗೆ ಪ್ರಮೋದ್ ಕರೆ ಮಾಡಿ ಜಗಳವಾಡಿದ್ದಾರೆ.
ಇದಾದ ನಂತರ, ಗುರುವಾರ ಪ್ರಮೋದ್ ಕೊಠಡಿಯಿಂದ ಹೊರಬಾರದೇ ಇದ್ದುದನ್ನು ಗಮನಿಸಿದ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ, ಬಾಗಿಲು ತಟ್ಟಿದ್ದಾರೆ. ಈ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪ್ರಮೋದ್ ಅವರ ತಾತ ಬಾಬುರಾಮ್ ಹೇಳಿದ್ದಾರೆ. ಈ ಕುರಿತು ಭೂತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಎದುರೇ ಮಾಳಿಗೆಯಿಂದ ಬಿದ್ದು ಪತಿ ಸಾವು: ಇನ್ನೊಂದೆಡೆ, ಪಂಜಾಬ್ನ ಲೂಧಿಯಾನ ಜಿಲ್ಲೆಯ ಖನ್ನಾ ಪಟ್ಟಣದಲ್ಲಿ ಕರ್ವಾ ಚೌತ್ ಹಬ್ಬದ ನಿಮಿತ್ತ ಚಂದ್ರನನ್ನು ನೋಡುವಾಗ ವ್ಯಕ್ತಿಯೊಬ್ಬ ತನ್ನ ಪತ್ನಿಯ ಎದುರೇ ಮಾಳಿಗೆಯಿಂದ ಬಿದ್ದು ಸಾವನ್ನಪ್ಪಿದ್ದ ಪ್ರಕರಣ ಜರುಗಿದೆ. 42 ವರ್ಷದ ಲಖ್ವಿಂದರ್ ರಾಮ್ ಮೃತರು. ಚಂದ್ರನನ್ನು ನೋಡಿ ನೀರು ಕುಡಿದು ಉಪವಾಸ ಕೊನೆಗೊಳಿಸಲೆಂದು ಮಹಿಳೆಯು ಮಾಳಿಗೆ ಏರಿದ್ದರು. ಈ ಸಂದರ್ಭದಲ್ಲಿ ಪತ್ನಿಯೊಂದಿಗೆ ಪತಿ ಮಾಳಿಗೆ ಹತ್ತಿದ್ದಾರೆ. ಆದರೆ, ಚಂದ್ರನನ್ನು ಮಾಳಿಗೆಯಿಂದ ನೋಡುತ್ತಿದ್ದಾಗ ಪತಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಕರ್ವಾ ಚೌತ್ ಹಬ್ಬದ ವೇಳೆ ದುರಂತ: ಚಂದ್ರನ ನೋಡುವಾಗ ಪತ್ನಿಯ ಎದುರೇ ಮಾಳಿಗೆಯಿಂದ ಬಿದ್ದು ಪತಿ ಸಾವು