ನವದೆಹಲಿ:ಪೆಗಾಸಸ್ ಪ್ರಕರಣ ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದು, ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ಇದೇ ವಿಚಾರವನ್ನಿಟ್ಟುಕೊಂಡು ಸಂಸತ್ ಅಧಿವೇಶನದಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಸಹ ನಡೆಸಲಾಗುತ್ತಿದೆ. ಇದೀಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದ ರಾಹುಲ್ ಗಾಂಧಿಯವರ ಮೊಬೈಲ್ ಹ್ಯಾಕ್ ಮಾಡುವ ಅವಶ್ಯಕತೆ ಏನಿದೆ? ಅದರಿಂದ ಸಿಗುವ ಲಾಭವಾದರೂ ಏನು? ಎಂದು ಪ್ರಶ್ನಿಸಿದ್ದಾರೆ. ಸಂಸತ್ ಅಧಿವೇಶನ ಮೊಟಕುಗೊಳಿಸುವ ಉದ್ದೇಶದಿಂದಲೇ ಪ್ರತಿಪಕ್ಷಗಳು ಈ ರೀತಿಯಾಗಿ ನಡೆದುಕೊಳ್ಳುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.