ಕೋಲ್ಕತ್ತಾ (ಪಶ್ಚಿಮ ಬಂಗಾಳ):ಶಾಲಾ ಉದ್ಯೋಗ, ಪುರಸಭೆಗಳ ಹುದ್ದೆಗಳು, ಕಲ್ಲಿದ್ದಲು ಮತ್ತು ದನಗಳ ಕಳ್ಳಸಾಗಣೆ, ಪಡಿತರ ವಿತರಣೆಯಂತಹ ಹಲವಾರು ಆರೋಪಗಳಲ್ಲಿ ಸಿಲುಕಿರುವ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಇದೀಗ ಸಂಸದೆ ಮಹುವಾ ಮೊಯಿತ್ರಾ ಅವರ 'ಪ್ರಶ್ನೆಗಾಗಿ ಹಣ ಸ್ವೀಕಾರ' ಕೇಸ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷಕ್ಕೆ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಸಂಸದೆಯ ಪರವಾಗಿ ಯಾವುದೇ ಹೇಳಿಕೆ ನೀಡದೇ ಅಂತರ ಕಾಯ್ದುಕೊಂಡಿದೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ಕ್ಷೇತ್ರದ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆ ಮಾಡಲು ಉದ್ಯಮಿಯಿಂದ ಹಣ, ಸೌಲಭ್ಯಗಳನ್ನು ಪಡೆದುಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಸ್ಪೀಕರ್ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಇದರ ಬೆನ್ನಲ್ಲೇ ಉದ್ಯಮಿ ಕೂಡ ತಾನು ಸಂಸದೆ ಮಹುವಾ ಅವರಿಂದ ಸದನದಲ್ಲಿ ಪ್ರಶ್ನೆ ಕೇಳಿಸಿದ್ದೇನೆ. ಅದಕ್ಕಾಗಿ ಅವರು ನನ್ನಿಂದ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಪಕ್ಷಕ್ಕೆ ಭಾರf ಹಿನ್ನಡೆ ತಂದಿದೆ.
ಪ್ರತಿಕ್ರಿಯೆಗೆ ನಿರಾಕರಿಸಿದ ಟಿಎಂಸಿ:ಟಿಎಂಸಿ ರಾಜ್ಯ ವಕ್ತಾರ ಕುನಾಲ್ ಘೋಷ್, ಉನ್ನತ ನಾಯಕತ್ವದ ಸೂಚನೆಯಂತೆ ಟಿಎಂಸಿ ಈ ವಿವಾದದಲ್ಲಿ ಯಾವುದೇ ಹೊಣೆಗಾರಿಕೆ ಹೊರಲು ಸಿದ್ಧವಿಲ್ಲ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವುದು ಪಕ್ಷ ಸಂಸದೆಯಿಂದ ಅಂತರ ಕಾಯ್ದುಕೊಂಡಿದೆ ಎಂದು ಸೂಚಿಸುತ್ತದೆ. ವಿವಾದದ ಆರಂಭದಿಂದಲೂ, ಪಕ್ಷದ ನಾಯಕತ್ವವು ಈ ವಿಷಯದಲ್ಲಿ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತಿದೆ.
ವಿವಾದ ಉಂಟಾದ ಆರಂಭದಲ್ಲಿ ಯಾವುದೇ ಹೇಳಿಕೆಯನ್ನು ಪಕ್ಷದ ಸೂಕ್ತ ನಾಯಕರು ಮಾತ್ರ ನೀಡುತ್ತಾರೆ ಎಂದು ಹೇಳಿತ್ತು. ಇದೀಗ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಸಂಸದೆ ಮೊಯಿತ್ರಾ ಅವರು ಏಕಾಂಗಿಯಾಗಿ ಇದನ್ನು ಎದುರಿಸಬೇಕು ಎಂಬ ಸ್ಪಷ್ಟ ಸೂಚನೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಮೊಯಿತ್ರಾರನ್ನು ಪಕ್ಷದೊಳಗೆ ಪ್ರತ್ಯೇಕಿಸಲು ಹಲವಾರು ಕಾರಣಗಳಿವೆ ಎಂದು ಹೇಳಲಾಗಿದೆ.
ಅದಾನಿ, ಹಗರಣಗಳ ಹೊಡೆತ:ಸಂಸದೆ ಮೊಯಿತ್ರಾ ಅವರು ಸಂಸತ್ತಿನಲ್ಲಿ ತೀಕ್ಷ್ಣ ಹೇಳಿಕೆಗಳಿಂದಲೇ ಹೆಸರು ಪಡೆದವರು. ಅದಾನಿ ಕುರಿತು ಪ್ರಶ್ನೆ ಕೇಳುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಆದರೆ, ಅದೇ ವಿಚಾರ ಅವರಿಗೆ ಮುಳುವಾಗಿದೆ. ಕಾರಣ ಪಶ್ಚಿಮ ಬಂಗಾಳದಲ್ಲಿ ಅದಾನಿ ಗ್ರೂಪ್ ಭವಿಷ್ಯದ ಹೂಡಿಕೆ ಮಾಡುವುದಾಗಿ ಹೇಳಿದೆ. ಕಳೆದ ವರ್ಷ ಸರ್ಕಾರ ಆಯೋಜಿಸಿದ್ದ ಬಂಗಾಳ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ರಾಜ್ಯದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದ್ದರು.
ಸಂಸತ್ತಿನಲ್ಲಿ ತಮ್ಮ ಪಕ್ಷದ ಸಂಸದೆ ಅದಾನಿ ಗ್ರೂಪ್ ವಿರುದ್ಧ ತೀವ್ರ ಟೀಕೆ ಮಾಡಿದ್ದು, ಹೂಡಿಕೆಯನ್ನು ಹಿಂಪಡೆದರೆ ಕಷ್ಟ ಎಂಬ ಕಾರಣದಿಂದ ವಿವಾದವನ್ನು ಸಮರ್ಥಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರದ ಮೇಲೆ ಈಗಾಗಲೇ ಶಾಲಾ ಉದ್ಯೋಗಗಳು, ಪುರಸಭೆಗಳ ಉದ್ಯೋಗಗಳು, ಕಲ್ಲಿದ್ದಲು ಮತ್ತು ದನಗಳ ಕಳ್ಳಸಾಗಣೆ, ಪಡಿತರ ವಿತರಣೆಯಲ್ಲಿ ಅಕ್ರಮಗಳ ಆರೋಪವಿದೆ. ಇದೆಲ್ಲವನ್ನೂ ನಿಭಾಯಿಸಲು ಕಷ್ಟಸಾಧ್ಯವಾಗಿರುವ ವೇಳೆ ಸಂಸದೆಯ ಪ್ರಶ್ನೆಗಾಗಿ ಹಣ ವಿವಾದ ಹೊಸ ತಲೆನೋವು ತರಲಿದೆ ಎಂಬುದು ಹೈಕಮಾಂಡ್ನ ಅಂತರಕ್ಕೆ ಬಹುದೊಡ್ಡ ಕಾರಣವಾಗಿದೆ.
ಇದನ್ನೂ ಓದಿ:''ಅದು ಅಧಿಕೃತ ಲೆಟರ್‌ಹೆಡ್ ಅಲ್ಲ'': ಉದ್ಯಮಿ ಅಫಿಡವಿಟ್ಗೆ ಮಹುವಾ ಮೊಯಿತ್ರಾ ಪ್ರತಿಕ್ರಿಯೆ