ಲಖನೌ/ಉತ್ತರ ಪ್ರದೇಶ: ಕಾಶ್ಮೀರದ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಬಹುದಾದ್ರೆ ಅಕ್ಟೋಬರ್ 2021ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆಯೂ 'ಲಖಿಂಪುರ್ ಫೈಲ್ಸ್' ಎಂಬ ಸಿನಿಮಾ ಏಕೆ ಮಾಡಬಾರದು ಅಂತಾ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ನಿನ್ನೆ ಸಂಜೆ ಸೀತಾಪುರದಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಕುರಿತು ಸಿನಿಮಾ ಮಾಡಲಾಗಿದೆ. ಲಖೀಂಪುರ ಖೇರಿಯು ಸೀತಾಪುರದ ಪಕ್ಕದ ಜಿಲ್ಲೆಯಾಗಿದೆ. ಅಲ್ಲಿ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ಜೀಪ್ ಹರಿಸಲಾಗಿತ್ತು. ಈ ಘಟನೆ ಕುರಿತು 'ಲಖಿಂಪುರ್ ಫೈಲ್ಸ್' ಎಂಬ ಚಿತ್ರವನ್ನ ಏಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಏನಿದು ಲಖಿಂಪುರ ಖೇರಿ ಘಟನೆ?:ಅಕ್ಟೋಬರ್ 3, 2021 ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.