ಕರ್ನಾಟಕ

karnataka

ETV Bharat / bharat

ಕೋವಿಡ್ ಹೆಚ್ಚಾಗುತ್ತಿದ್ದರೂ ಕುಂಭಮೇಳ ಯಾಕೆ ನಿಲ್ಲಿಸುತ್ತಿಲ್ಲಾ? - ಉತ್ತರಾಖಂಡ ಕೊರೊನಾ ಪ್ರಕರಣ

ಉತ್ತರಾಖಂಡದ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಕುಂಭಮೇಳ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ವೇಗವಾಗಿ ಕೋವಿಡ್ ಹರಡುತ್ತಿದ್ದು, ಕುಂಭಮೇಳದಿಂದಾಗಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Uttarakhand Chief Minister
ಕುಂಭಮೇಳದಲ್ಲಿ ಕೋವಿಡ್

By

Published : Apr 17, 2021, 8:46 AM IST

ಹರಿದ್ವಾರ (ಉತ್ತರಾಖಂಡ) : ಕೋವಿಡ್ ಮಿತಿ ಮೀರುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ 11 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳವನ್ನು ಅವಧಿಗಿಂತ ಮುನ್ನವೇ ಕೊನೆಗೊಳಿಸುವ ಸಾಧ್ಯತೆಯಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಂಭಮೇಳದ ಅವಧಿಯನ್ನು 5 ತಿಂಗಳಿನಿಂದ 1 ತಿಂಗಳಿಗೆ ಕಡಿತಗೊಳಿಸಲಾಗಿದೆ. ಈ ನಡುವೆ ಕುಂಭ ಮೇಳ ಏಪ್ರಿಲ್ 30 ರವರೆಗೆ ಮುಂದುವರೆಯಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಹೇಳಿದ್ದಾರೆ.

ಅವಧಿಗಿಂತ ಮುನ್ನ ಕುಂಭ ಮೇಳ ಕೊನೆಗೊಳ್ಳುತ್ತದೆಯೇ?

ಉತ್ತರಾಖಂಡದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಕುಂಭಮೇಳವನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಸಮಯದಲ್ಲಿ ರಾಜ್ಯ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಕೋವಿಡ್-19 ಸೋಂಕು ಉತ್ತರಾಖಂಡದಲ್ಲಿ ವೇಗವಾಗಿ ಹಬ್ಬುತ್ತಿದೆ ಮತ್ತು ಕುಂಭಮೇಳದಿಂದಾಗಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 8,765 ಜನರು ಕೋವಿಡ್​​ಗೆ ತುತ್ತಾಗಿದ್ದಾರೆ ಮತ್ತು 50 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ಐದು ದಿನಗಳ ಉತ್ತರಾಖಂಡದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಅಂಕಿ ಅಂಶ :

11 ಏಪ್ರಿಲ್ : ಪಾಸಿಟಿವ್ ಪ್ರಕರಣಗಳು - 1,333, ಸಾವು - 8

12 ಏಪ್ರಿಲ್ : ಪಾಸಿಟಿವ್ ಪ್ರಕರಣಗಳು - 1,334, ಸಾವು -7

13 ಏಪ್ರಿಲ್ : ಪಾಸಿಟಿವ್ ಪ್ರಕರಣಗಳು - 1,925, ಸಾವು -13

14 ಏಪ್ರಿಲ್ : ಪಾಸಿಟಿವ್ ಪ್ರಕರಣಗಳು -1,953, ಸಾವು - 13

15 ಏಪ್ರಿಲ್ : ಪಾಸಿಟಿವ್ ಪ್ರಕರಣಗಳು - 2,220, ಸಾವು - 9

ಸಾಧುಗಳಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್

ಹರಿದ್ವಾರದ ಕುಂಭ ನಗರದಲ್ಲಿ ಕಳೆದ ಐದು ದಿನಗಳಲ್ಲಿ 2,526 ಪ್ರಕರಣಗಳು ವರದಿಯಾಗಿವೆ.

ಆದರೆ, ಸಾಧುಗಳ ಪವಿತ್ರ ಸ್ನಾನದ ನಂತರ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಲು ಸಾಧ್ಯವಿಲ್ಲ.

ನಿರಂಜನಿ ಅಖಾರದ ಕಾರ್ಯದರ್ಶಿ ಮಹಂತ್ ರವೀಂದ್ರ ಪುರಿ ಸೇರಿದಂತೆ ಅಖಾರಾದ 17 ಸಾಧುಗಳಲ್ಲಿ ಕೋವಿಡ್ ದೃಢಪಟ್ಟಿದೆ.

ಅದೇ ರೀತಿ ಅಖಾರಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ಮಹಂತ್ ನರೇಂದ್ರ ಗಿರಿ ಅವರು ಏಪ್ರಿಲ್ 11 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿವಿಧ ಅಖಾರಗಳಿಗೆ ಸಂಬಂಧಿಸಿದ ಅನೇಕ ಸಾಧುಗಳು ಕೂಡ ಸೋಂಕಿನಿಂದ ಬಳಲುತ್ತಿದ್ದಾರೆ. ಈವರೆಗೆ , 60ಕ್ಕೂ ಹೆಚ್ಚು ಸಾಧುಗಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.

ಕೋವಿಡ್ ದೃಢಪಟ್ಟ ಸಾಧುಗಳ ಮಾಹಿತಿ

ಏಪ್ರಿಲ್ 16 : ನಿರಂಜನಿ ಅಖಾರದ ಕಾರ್ಯದರ್ಶಿ ರವೀಂದ್ರ ಪುರಿ ಸೇರಿದಂತೆ 17 ಮಂದಿ ಸಾಧುಗಳು ಕೋವಿಡ್​ಗೆ ತುತ್ತಾಗಿದ್ದಾರೆ.

ಏಪ್ರಿಲ್ 15 : ಒಂಬತ್ತು ಸಾಧುಗಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಈ ಪೈಕಿ ನಾಲ್ವರು ಜುನಾ ಅಖಾರಕ್ಕೆ ಸೇರಿದವರು, ಇಬ್ಬರು ಅಹ್ವಾನ್ ಅಖಾರಾದವರು ಮತ್ತು ಮೂವರು ನಿರಂಜನಿ ಅಖಾರಾದವರು.

ಏಪ್ರಿಲ್ 14 : ಒಟ್ಟು 31,308 ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಜುನಾ ಅಖಾರಾದ ನಾಲ್ವರು, ಅಗ್ನಿ, ಮಹಾನಿರ್ವಾಣಿ, ದಿಗಂಬರ ಮತ್ತು ಆನಿ ಮತ್ತು ಆನಂದ್ ಅಖಾರಗಳ ತಲಾ ಒಬ್ಬರು ಕೋವಿಡ್ ಪಾಸಿಟಿವ್ ಕಂಡು ಬಂದಿದೆ.

ಏಪ್ರಿಲ್ 13 : ಒಟ್ಟು 29,825 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಜುನಾ ಅಖಾರಾದ ಐವರು ಮತ್ತು ನಿರಂಜನಿ ಅಖಾರಾದ ಮೂವರು ಸಾಧುಗಳಿಗೆ ಕೋವಿಡ್ ದೃಢಪಟ್ಟಿದೆ.

ಏಪ್ರಿಲ್ 12 : ಒಟ್ಟು 26,694 ಜನರನ್ನು ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಆರು ಸಾಧುಗಳಿಗೆ ಕೊರೊನಾ ವಕ್ಕರಿಸಿರುವುದು ಗೊತ್ತಾಗಿದೆ.

ಏಪ್ರಿಲ್ 11 : ಒಟ್ಟು 23,394 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಜುನಾ ಅಖಾರಾದ ಇಬ್ಬರು ಮತ್ತು ನಿರಂಜನಿ ಅಖಾರ ಒಬ್ಬರು ಸಾಧುಗಳಿಗೆ ಕೋವಿಡ್ ದೃಡಪಟ್ಟಿದೆ.

ಏಪ್ರಿಲ್ 3 : ಕೃಷ್ಣ ಧಾಮ್‌ನ ಏಳು ಸಾಧುಗಳಲ್ಲಿ ಕೋವಿಡ್ ಕಂಡು ಬಂದಿದೆ.

ಮಹಾಮಂಡಲೇಶ್ವರ್ ಕೋವಿಡ್​ಗೆ ಬಲಿಯಾದ ಬಳಿಕ ಸಂತ ಸಮಾಜದಲ್ಲಿ ಆತಂಕ:

ಮಹಾಮಂಡಲೇಶ್ವರ ಕಪಿಲ್ ದೇವ್ ದಾಸ್ ಅವರ ಮರಣದ ನಂತರ ಹರಿದ್ವಾರದ 'ಸಂತ ಸಮಾಜಕ್ಕೆ ಭಯ ಮತ್ತು ಆಘಾತ ಉಂಟಾಗಿದೆ.

ಈ ಘಟನೆಯ ನಂತರ, ಪಂಚಾಯತ್​ ಅಖಾರಾದ ಶ್ರೀ ನಿರಂಜನಿ ಮತ್ತು ಆನಂದ್ ಅಖಾರದ ಸಾಧುಗಳು ಏಪ್ರಿಲ್ 17 ರಂದು(ಇಂದು) ಕುಂಭಮೇಳ ಮುಕ್ತಾಯಗೊಳಿಸುವುದಾಗಿ ಘೋಷಿಸಿದ್ದಾರೆ. ನಿರಂಜನಿ ಅಖಾರದ ಸಾಧುಗಳು ಮತ್ತು ಸಂತರು ತಾತ್ಕಾಲಿಕ ವ್ಯವಸ್ಥೆಗಳನ್ನು ಸಹ ಇಂದೇ ತೆಗೆದು ಹಾಕುವುದಾಗಿ ಹೇಳಿದ್ದಾರೆ.

ಕೋವಿಡ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಪಾಲಿಸುವುದು ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಹಾಮಂಡಲೇಶ್ವರ, ನಿರಂಜನಿ ಮತ್ತು ಆನಂದ್ ಅಖಾರದ ಮಹಾಂತ್‌ಗಳು ಏಪ್ರಿಲ್ 17 ರಂದು ತಮ್ಮ ಶಿಬಿರಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದಾರೆ. ಏಪ್ರಿಲ್ 17 ರ ನಂತರ ಅವರ ಅಖಾರಗಳಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆಯುವುದಿಲ್ಲ. ಹೊರಗಿನಿಂದ ಬಂದಿರುವ ಸಾಧುಗಳು ಹಿಂದಿರುಗುತ್ತಾರೆ ಮತ್ತು ಹರಿದ್ವಾರದ ಸಾಧುಗಳು ತಮ್ಮ ಅಖಾರಗಳಿಗೆ ಹೋಗುತ್ತಾರೆ ಎಂದು ನಿರಂಜನ್ ಅಖಾರಾದ ಮಹಾಮಂಡಲೇಶ್ವರ ಕೈಲಶಾನಂದ್ ಗಿರಿ ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕುಂಭಮೇಳದಿಂದ ಹಿಂದಿರುಗುವ ನಿರ್ಧಾರವನ್ನು ನಿರಂಜಿನಿ ಅಖಾರ ತೆಗೆದುಕೊಂಡಿದೆ. ನಮ್ಮ ಅಖಾರದಿಂದ ಏಪ್ರಿಲ್ 27 ರಂದು ಕೇವಲ 15 ರಿಂದ 20 ಸಾಧುಗಳು ಮಾತ್ರ ಪವಿತ್ರ ಸ್ನಾನ ಮಾಡಲಿದ್ದಾರೆ. ಎಲ್ಲಾ ಸಂತರು ಮತ್ತು ಭಕ್ತರು ಹರಿದ್ವಾರದಿಂದ ತಮ್ಮ ತಮ್ಮ ಸ್ಥಳಗಳಿಗೆ ತೆರಳುವಂತೆ ಕೋರಲಾಗಿದೆ ಎಂದು ನಿರಂಜನಿ ಅಖಾರದ ಕಾರ್ಯದರ್ಶಿ ಮಹಂತ್ ರವೀಂದ್ರಪುರಿ ಹೇಳಿದ್ದಾರೆ.

ಸದ್ಯ, ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಲಕ್ಷಾಂತರ ಜನ ಸೇರಿದ ಕುಂಭಮೇಳ ನಡೆಯುತ್ತಿದೆ. ಕೋವಿಡ್ ಹೆಚ್ಚಳಕ್ಕೆ ಕುಂಭಮೇಳವೇ ಕಾರಣ ಎಂದು ಹೇಳಲಾಗದಿದ್ದರೂ, ಹಲವು ಸಾಧುಗಳಲ್ಲಿ ಕೋವಿಡ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಕುಂಭಮೇಳ ಮುಂದುವರೆಸುವ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಅನಿವಾರ್ಯವಾಗಿದೆ.

ABOUT THE AUTHOR

...view details