ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, "ಪೂರ್ವ ಲಡಾಖ್ನ ಪರಿಸ್ಥಿತಿಯ ಬಗ್ಗೆ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದಾರೆ. ನಮ್ಮ ಸೈನಿಕರು ಈಗ ಫಿಂಗರ್-3ನಲ್ಲಿ ಬೀಡುಬಿಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ನಮ್ಮ ಭೂಪ್ರದೇಶ ಫಿಂಗರ್ 4ರವರೆಗೆ ಇದೆ. ಆದರೆ, ಈಗ ನಾವು ಫಿಂಗರ್ 4 ರಿಂದ ಫಿಂಗರ್ 3ಗೆ ಸ್ಥಳಾಂತರಗೊಂಡಿದ್ದೇವೆ. ಹಾಗಾದರೆ, ಮೋದಿ ಯಾಕೆ ನಮ್ಮ ಪ್ರದೇಶವನ್ನು ಚೀನಿಯರಿಗೆ ಬಿಟ್ಟುಕೊಟ್ಟಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಡಿಯಿಂದ ಚೀನಾ ಪಡೆ ಹಿಂದೆ ಸರಿಯುತ್ತಿದೆ: ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ
ಪ್ರಧಾನಿ ಮೋದಿ, ಚೀನಾ ವಿರುದ್ಧ ನಿಲ್ಲಲಾಗದ ಹೇಡಿ. ನಮ್ಮ ಸೇನೆಯ ತ್ಯಾಗದ ಮೇಲೆ ಅವರು ಉಗುಳುತ್ತಿದ್ದಾರೆ. ನಮ್ಮ ಸೈನಿಕರ ತ್ಯಾಗಕ್ಕೆ ದ್ರೋಹ ಮಾಡುತ್ತಿದ್ದಾರೆ. ಭಾರತದಲ್ಲಿ ಯಾರಿಗೂ ಇದನ್ನು ಮಾಡಲು ಅನುಮತಿ ನೀಡಬಾರದು ಎಂದು ರಾಗಾ ಕಿಡಿಕಾರಿದರು.
ಪ್ರಮುಖ ಭಾಗವಾದ ಡೆಪ್ಸಾಂಗ್ ಬಯಲು ಪ್ರದೇಶ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಂದು ಮಾತನ್ನೂ ಆಡಲಿಲ್ಲ. ಇಲ್ಲಿ ಸತ್ಯವೆಂದರೆ ಪ್ರಧಾನಿ ಮೋದಿ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ. ಈ ವಿಚಾರದಲ್ಲಿ ದೇಶದ ಜನರಿಗೆ ಮೋದಿ ಉತ್ತರ ನೀಡಬೇಕು. ದೇಶದ ಭೂಪ್ರದೇಶವನ್ನು ರಕ್ಷಿಸುವುದು ಪ್ರಧಾನ ಮಂತ್ರಿಯ ಜವಾಬ್ದಾರಿಯಾಗಿದೆ ಎಂದರು.