ಕರ್ನಾಟಕ

karnataka

ETV Bharat / bharat

ಬಿಜೆಪಿ ದ್ವೇಷಿಸುವಂತಹ ತಪ್ಪನ್ನು ನೆಹರೂ ಏನ್​ ಮಾಡಿದ್ದಾರೆ: ಸಂಜಯ್ ರಾವತ್ ಪ್ರಶ್ನೆ - ರಾಹುಲ್ ಗಾಂಧಿ

ಕೇಂದ್ರ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಮಾಜಿ ಪ್ರಧಾನಿ ನೆಹರೂ ಫೋಟೋ ಇಲ್ಲದಿರುವುದು ಕೇಂದ್ರದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್ ಕಿಡಿಕಾರಿದ್ದಾರೆ.

ಸಂಜಯ್ ರಾವತ್
ಸಂಜಯ್ ರಾವತ್

By

Published : Sep 5, 2021, 12:53 PM IST

ಮುಂಬೈ: 75 ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆಯ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಮಾಜಿ ಪ್ರಧಾನಿ ನೆಹರೂ ಫೋಟೋ ಇಲ್ಲದಿರುವುದು ಕೇಂದ್ರದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್ ಕಿಡಿಕಾರಿದ್ದಾರೆ.

ಸೇನಾ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿರುವ ಅಂಕಣದಲ್ಲಿ ಅವರು, ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್‌ಆರ್)ಯು ನೆಹರೂ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಫೋಟೋಗಳನ್ನು ಪೋಸ್ಟರ್​ನಲ್ಲಿ ಹಾಕಿಲ್ಲ. ಇದು ರಾಜಕೀಯ ಸೇಡು ತೀರಿಸಿಕೊಳ್ಳುವ ಕೃತ್ಯ ಎಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಯಾಕೆ ನೆಹರೂ ಅವರನ್ನು ದ್ವೇಷಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಪೋಸ್ಟರ್​ವೊಂದರಿಂದ ಹೊರಗಿಡುವುದು ತರವಲ್ಲ. ಈ ಕೃತ್ಯವು ರಾಜಕೀಯ ಪ್ರತೀಕಾರ. ಅಲ್ಲದೆ, ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡುವ ಅವಮಾನ ಎಂದಿದ್ದಾರೆ.

ಸ್ವಾತಂತ್ರ್ಯದ ನಂತರ ನೆಹರೂ ಜಾರಿಗೆ ತಂದ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಕೊಡುಗೆಯನ್ನು ಯಾರೂ ನಿರಾಕರಿಸುವಂತಿಲ್ಲ. ಬಿಜೆಪಿಯು ದ್ವೇಷಿಸುವಂತಹ ತಪ್ಪನ್ನು ನೆಹರೂ ಏನ್ ಮಾಡಿದ್ದಾರೆ. ಅವರು ನಿರ್ಮಿಸಿದ ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಮುಂದುವರಿಸಲು ಮಾರಾಟವಾಗುತ್ತಿವೆ. ಕೇಂದ್ರ ಇತ್ತೀಚೆಗೆ ಘೋಷಿಸಿರುವ ರಾಷ್ಟ್ರೀಯ ಮಾನಿಟೈಸೇಶನ್ ಪೈಪ್‌ಲೈನ್ ಮತ್ತು ನೆಹರೂ ಅವರ ದೂರ ದೃಷ್ಟಿಕೋನದಿಂದಾಗಿ ದೇಶವು ಆರ್ಥಿಕ ವಿನಾಶದಿಂದ ಪಾರಾಯಿತು ಎಂದು ಉಲ್ಲೇಖಿಸಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೂ, ಹಿಂದಿನ ಸರ್ಕಾರ ವಿತರಿಸುತ್ತಿದ್ದ ಶಾಲಾ ಬ್ಯಾಗ್​ಗಳ ಮೇಲಿದ್ದ ಜಯಲಲಿತಾ ಮತ್ತು ಇ.ಕೆ.ಪಳನಿಸ್ವಾಮಿ ಫೋಟೋ ತೆಗೆಯದಿರಲು ನಿರ್ಧಾರ ಕೈಗೊಂಡಿದೆ. ಇದು ಸ್ಟಾಲಿನ್​ ಅವರ ಪ್ರಬುದ್ಧತೆ ತೋರಿಸುತ್ತದೆ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮೋದಿ ಸರ್ಕಾರ ಟೀಕಿಸುವುದು ಅರ್ಥವಾಗುವಂತಹದ್ದೇ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರವು ತನ್ನ ದ್ವೇಷವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ 13 ಪ್ರಭಾವಿ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿಯೇ ನಂಬರ್​-1 ಲೀಡರ್​​

ರಾಷ್ಟ್ರ ನಿರ್ಮಾಣದಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿಯವರ ಕೊಡುಗೆಗಳನ್ನು ನೀವು ಎಂದಿಗೂ ನಾಶಪಡಿಸಲು ಸಾಧ್ಯವಿಲ್ಲ. ನೆಹರೂ ಕೊಡುಗೆಗಳನ್ನು ನಿರಾಕರಿಸುವವರನ್ನು ಇತಿಹಾಸದ ಖಳನಾಯಕರು ಎಂದು ಕರೆಯಲಾಗುತ್ತದೆ ಎಂದು ರಾವತ್​ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details