ನವದೆಹಲಿ: ಕೇಂದ್ರದ ರಕ್ಷಣಾ ಇಲಾಖೆ ಭಾರತೀಯ ಸೇನೆಯ ಮೂರು ದಳಗಳ ನೇಮಕಾತಿಗೆ 'ಅಗ್ನಿಪಥ' ಎಂಬ ಹೊಸ ಯೋಜನೆ ಘೋಷಿಸಿತ್ತು. ಆದರೆ, ಈಗ ದೇಶದಲ್ಲಿ ಸೇನೆಗೆ ಸೇರುವ ಆಕಾಂಕ್ಷಿಗಳಿಂದ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಹಾರ, ರಾಜಸ್ಥಾನ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.
ಅಗ್ನಿಪಥ ನೇಮಕಾತಿ ಯೋಜನೆಗೆ ವಿರೋಧ ಏಕೆ?: ಭಾರತೀಯ ಸೇನೆಯ ಅಗ್ನಿಪಥ ನೇಮಕಾತಿ ಯೋಜನೆ ಈ ಹೆಸರು ಕೇಳಿದರೆ ಈಗ ಉತ್ತರ ಭಾರತದಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಬೆಂಕಿಯಾಗುತ್ತಿದ್ದಾರೆ. ರೈಲು, ಬಸ್ಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಅಗ್ನಿಪಥ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಗ್ನಿಪಥ ನೇಮಕಾತಿ ಯೋಜನೆಗೆ ಭದ್ರತೆ ಕುರಿತು ಸಂಪುಟ ಸಮಿತಿ ಮಂಗಳವಾರ ಅನುಮತಿ ನೀಡಿದೆ. ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ 4 ವರ್ಷ ಮಾತ್ರ ಸೇವೆಗೆ ಅವಕಾಶ ಸಿಗಲಿದೆ. ಹದಿನೇಳೂವರೆ ವರ್ಷದಿಂದ 22 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ 10ನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ.
ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ 4 ವರ್ಷ ಪೂರೈಸಿದ ಬಳಿಕ ಸೇನೆ ಕೆಲಸ ಬಿಟ್ಟು ಬರಬೇಕು. ಈ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ರೆಗ್ಯುಲರ್ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ. ಯೋಜನೆಯಿಂದ ಇಷ್ಟು ವರ್ಷಗಳ ಕಾಲ ಮಾಡುತ್ತಿದ್ದ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ.
ಭಾರತದಲ್ಲಿ 2032ರ ವೇಳೆಗೆ ಸೇನೆಯಲ್ಲಿ ಶೇ. 50ರಷ್ಟು ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಕಾರ್ಯನಿರ್ವಹಣೆ ಮಾಡುವ ಲೆಕ್ಕಾಚಾರ ಇದೆ. 90 ದಿನಗಳಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವರ್ಷ 45 ಸಾವಿರ ಮಂದಿ ಅಗ್ನಿಪಥ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಹಾಲಿ ಇರುವ ವ್ಯವಸ್ಥೆಯಡಿ ಸೇನೆಯಲ್ಲಿ ಸೈನಿಕರಾಗಿ ನೇಮಕವಾದರೆ 12 ರಿಂದ 15 ವರ್ಷ ಸೇವೆಗೆ ಅವಕಾಶ ಇದೆ. ಆದರೆ, ಅಗ್ನಿಪಥದಲ್ಲಿ ಕೇವಲ 4 ವರ್ಷ ಮಾತ್ರ ಸೇವೆಗೆ ಅವಕಾಶ ಇದೆ. ಹೀಗಾಗಿ, ಸೇನೆಗೆ ಸೇರುವ ಆಕಾಂಕ್ಷೆ ಇರುವ ನಿರುದ್ಯೋಗಿ ಯುವಕರಿಗೆ ನಿರಾಸೆ ಆಗಿದೆ. ಈ ನಿರಾಸೆ ಈಗ ಆಕ್ರೋಶವಾಗಿ ಪರಿವರ್ತನೆಯಾಗಿದೆ.
ಸೇನೆಗೆ ಸೇರುವ ಆಕಾಂಕ್ಷಿಗಳ ಬೇಡಿಕೆ ಏನು?:
- ಸೇನೆಯಲ್ಲಿ 15 ವರ್ಷ ಸೈನಿಕ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು.
- 4 ವರ್ಷದ ಅಗ್ನಿಪಥ ಯೋಜನೆಯ ಘೋಷಣೆ ಸರಿಯಲ್ಲ.
- ಕಳೆದ 2 ವರ್ಷಗಳಿಂದ ಸೇನೆಗೆ ಸೈನಿಕರ ನೇಮಕಾತಿಯೇ ನಡೆದಿಲ್ಲ.
- ಶೀಘ್ರವಾಗಿ ಹಳೆ ಪದ್ದತಿಯಡಿ ಸೈನಿಕರ ನೇಮಕಾತಿಗೆ ಆಗ್ರಹ.
- ಅಗ್ನಿಪಥ ಯೋಜನೆಯಿಂದ ಉಜ್ವಲ ಭವಿಷ್ಯ ಇಲ್ಲ.
- ಅಗ್ನಿಪಥ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇಲ್ಲ.
- ಸೇನೆಯಲ್ಲಿ 4 ವರ್ಷದ ಸೇವೆ ಬಳಿಕ ಮತ್ತೆ ನಿರುದ್ಯೋಗಿಗಳಾಗಬೇಕು. ಇಲ್ಲವೇ ಸೆಕ್ಯೂರಿಟಿ ಗಾರ್ಡ್ ಆಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಹೀಗಾಗಿ ಅಗ್ನಿಪಥ ಯೋಜನೆಗೆ ಯುವಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆಕ್ಷೇಪಗಳಿಗೆ ಉತ್ತರ ನೀಡಿದ ಕೇಂದ್ರ ಗೃಹ ಇಲಾಖೆ: ಆದರೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯ ಆಕ್ಷೇಪಗಳಿಗೆ ಉತ್ತರ ನೀಡುತ್ತಿದೆ. ಅಗ್ನಿಪಥ ಯೋಜನೆಯಡಿ ನೇಮಕಗೊಂಡವರನ್ನು 'ಅಗ್ನಿವೀರರು' ಎಂದು ಕರೆಯಲಾಗುತ್ತದೆ. ಅಗ್ನಿವೀರರಿಗೆ ಪ್ರಾರಂಭದಲ್ಲಿ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದರೇ, ಉತ್ತಮ ಕೌಶಲ್ಯದ ತರಬೇತಿ ಸಿಗಲಿದೆ. ಹೀಗಾಗಿ, ಅಗ್ನಿ ಪಥ ಯೋಜನೆಯ ಸೇವೆ ಸಲ್ಲಿಸಿ, ಸೇನೆಯಿಂದ ಹೊರ ಬಂದ ಬಳಿಕ ಬೇರೆ ಉದ್ಯೋಗಾವಕಾಶಗಳು ಸಿಗುತ್ತವೆ.