ನವದೆಹಲಿ: ಸತತ ಕಳೆದ ಮೂರು ತಿಂಗಳುಗಳಲ್ಲಿ ಮೈನಸ್ 0.52 ಶೇಕಡಾಕ್ಕೆ ಕುಸಿತ ಕಂಡಿದ್ದ ದೇಶದ ಸಗಟು ಮಾರಾಟಗಳ ಆಧಾರಿತ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 0.26ರಷ್ಟು ಏರಿಕೆ ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಗುರುವಾರ ಅಂಕಿ - ಅಂಶ ಬಿಡುಗಡೆ ಮಾಡಿರುವ ಸಚಿವಾಲಯ, ಈ ವರ್ಷದ ಮಾರ್ಚ್ನಿಂದ ನಿರಂತರವಾಗಿ ಕುಸಿತದ ಮಟ್ಟದಲ್ಲೇ ಇದ್ದ ಸಗಟು ಮಾರಾಟದ ಬೆಲೆಗಳಲ್ಲಿ ಏರಿಕೆ ಕಂಡು ಬಂದಿರುವುದರಿಂದ ಈ ವಲಯದ ಹಣದುಬ್ಬರ ಮೊದಲ ಬಾರಿಗೆ ಇಳಿತದ ವಲಯದಿಂದ ಹೊರಬಂದು ನವೆಂಬರ್ ತಿಂಗಳಿನಲ್ಲಿ ಭಾರಿ ಏರಿಕೆ ದಾಖಲಿಸಿದೆ. ಇದು ಕುಸಿತ ಕಾಣುತ್ತಿದ್ದ ಕಳೆದ ಎಂಟು ತಿಂಗಳುಗಳಲ್ಲಿ ಗರಿಷ್ಠ ಮಟ್ಟದ ಸಗಟು ಬೆಲೆ ಸೂಚ್ಯಂಕ(WPI) ದಾಖಲಾಗಿದೆ ಎಂದು ಹೇಳಿದೆ.
2022ರ ನವೆಂಬರ್ನಲ್ಲಿ 6.12 ಶೇಕಡಾ ಇದ್ದ ಸಗಟು ಬೆಲೆ ಆಧಾರಿತ ಮಾರಾಟದ ಹಣದುಬ್ಬರ 2023 ರ ಅಕ್ಟೋಬರ್ನಲ್ಲಿ ಮೈನಸ್ 0.52ಕ್ಕೆ ಇಳಿದಿತ್ತು. ಆಹಾರ ಸೂಚ್ಯಂಕದಲ್ಲಿ ಶೇಕಡಾ 1.9ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಸಗಟು ಬೆಲೆ ಆಧಾರಿತ ಹಣದುಬ್ಬರವೂ ಏರಿಕೆ ಕಂಡಿದೆ. ತರಕಾರಿಗಳ ಬೆಲೆಗಳು ತಿಂಗಳಿನಿಂದ ತಿಂಗಳಿಗೆ 16.45 ಶೇಕಡಾದಷ್ಟು ಹೆಚ್ಚಾಗಿದೆ. ಈರುಳ್ಳಿ ಬೆಲೆಯು 41.3 ಶೇಕಡಾದಷ್ಟು ಜಿಗಿದಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ.