ನವದೆಹಲಿ: ತಮ್ಮ ಬಣಕ್ಕೇ ನಿಜವಾದ ಶಿವಸೇನೆಯ ಮಾನ್ಯತೆ ನೀಡಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಸಲ್ಲಿಸಿರುವ ಅರ್ಜಿಯ ಮುಂದಿನ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕೆಂದು ಕೋರಿ ಶಿವಸೇನಾ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 1 ರಂದು ನಡೆಸಲಿದೆ.
ಯಾರ ಬತ್ತಳಿಕೆ ಸೇರಲಿವೆ ಬಿಲ್ಲು-ಬಾಣ? ಆ.1 ರಂದು ಸುಪ್ರೀಂ ಕೋರ್ಟ್ ವಿಚಾರಣೆ
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಗಳು ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸುತ್ತಿವೆ. ಈ ಮಧ್ಯೆ ಪಕ್ಷದ ಚಿಹ್ನೆ ಯಾರ ಪಾಲಾಗಲಿದೆ ಎಂಬುದೀಗ ಕುತೂಹಲದ ವಿಷಯ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರ ಪೀಠದ ಮುಂದೆ ಠಾಕ್ರೆ ಬಣದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣಾ ಆಯೋಗದ ಮುಂದಿರುವ ವಿಚಾರಣಾ ಪ್ರಕ್ರಿಯೆಗಳು, ಇಲ್ಲಿನ ಪ್ರಸ್ತುತ ವಿಚಾರಣೆಗಳ ಮೇಲೆ ಪರಿಣಾಮ ಬೀರುವುದರಿಂದ ಅವನ್ನು ತಡೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು. ಬಾಕಿ ಇರುವ ಅರ್ಜಿಗಳೊಂದಿಗೆ ಈ ಅರ್ಜಿಯನ್ನೂ ಸೇರಿಸಿ ಆಗಸ್ಟ್ 1 ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿತು.
ಶಿವಸೇನೆಯ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತು ತಮ್ಮದೆಂದು ಸಾಬೀತು ಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಠಾಕ್ರೆ ಮತ್ತು ಶಿಂದೆ ಬಣಕ್ಕೆ ಚುನಾವಣಾ ಆಯೋಗ ಇತ್ತೀಚೆಗೆ ತಿಳಿಸಿತ್ತು. ಶಿವಸೇನೆ ಶಾಸಕಾಂಗ ಪಕ್ಷ ಹಾಗೂ ಪಕ್ಷದ ಪದಾಧಿಕಾರಿಗಳ ಲಿಖಿತ ಹೇಳಿಕೆಗಳನ್ನು ಕೂಡ ಸಲ್ಲಿಸುವಂತೆ ಆಯೋಗ ಎರಡೂ ಬಣಗಳಿಗೆ ಸೂಚಿಸಿದೆ.