ಸೂರತ್ (ಗುಜರಾತ್):ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ನಿನ್ನೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ವಿಜಯ್ ರೂಪಾನಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಗುಜರಾತ್ನ ಮುಂದಿನ ಸಿಎಂ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಇಂದು ಗುಜರಾತ್‌ಗೆ ಆಗಮಿಸಿದ್ದು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಲುವಾಗಿ ಪಕ್ಷದ ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ. ಗಾಂಧಿನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಇವರು ಪಾಲ್ಗೊಂಡಿದ್ದು, ಶೀಘ್ರದಲ್ಲೇ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ವಿಜಯ್ ರೂಪಾನಿ ಕೂಡ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿಎಂ ರೇಸ್ನಲ್ಲಿರುವ ಅಭ್ಯರ್ಥಿಗಳಿವರು..
1. ನಿತಿನ್ ಪಟೇಲ್
ಪ್ರಸ್ತುತ ಗುಜರಾತ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ನಿತಿನ್ ಪಟೇಲ್ (65), ಹಿರಿಯ ಕದ್ವಾ ಪಾಟಿದಾರ್ ಸಮಾಜದ ನಾಯಕ. ಮೆಹ್ಸಾನಾ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರಾಗಿ ಇವರು ಹೆಸರು ಮಾಡಿದ್ದಾರೆ. 1995 ರಲ್ಲಿ ಸಚಿವ ಸಂಪುಟಕ್ಕೆ ಆಯ್ಕೆಯಾಗಿದ್ದ ಇವರು ಅಂದಿನಿಂದ ಹಣಕಾಸು ಮತ್ತು ಆರೋಗ್ಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಉನ್ನತ ಖಾತೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. 2016 ರಲ್ಲಿ ಆನಂದಿಬೆನ್ ಪಟೇಲ್ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ನಿತಿನ್ ಪಟೇಲ್ ಮುಂಚೂಣಿಯಲ್ಲಿದ್ದರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರೂಪಾನಿ ರಾಜೀನಾಮೆ.. 'ಮೃದು ಸ್ವಭಾವ'ವೇ ಅವರ ರಾಜಕೀಯ ಅಂತ್ಯಕ್ಕೆ ಕಾರಣವಾಯ್ತಾ!?
2. ಮನ್ಸುಖ್ ಮಾಂಡವಿಯಾ
ಮನ್ಸುಖ್ ಮಾಂಡವಿಯಾ (49) ಅವರು 2002 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. 2012 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2016 ರಲ್ಲಿ ಕೇಂದ್ರ ಮಂತ್ರಿ ಮಂಡಳಿಯಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು. ಇದೀಗ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಮಾಂಡವಿಯಾ, ಗುಜರಾತ್ ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದಾರೆಂದು ಹೇಳಲಾಗಿದೆ.
3.ಗೋರ್ಧನ್ ಜಡಾಫಿಯಾ
ಗುಜರಾತ್ನಲ್ಲಿ ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗರುವ ಗೋರ್ಧನ್ ಜಡಾಫಿಯಾ (67) ಅವರು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಹಾಗೂ 2002ರ ಗುಜರಾತ್ ಗಲಭೆ ವೇಳೆ ಗೃಹ ಸಚಿವರಾಗಿದ್ದರು. ಬಳಿಕ ಬಿಜೆಪಿ ತೊರೆದು ಮಹಾ ಗುಜರಾತ್ ಜನತಾ ಪಕ್ಷವನ್ನು ಕಟ್ಟಿದರು. ಬಳಿಕ ಮಾಜಿ ಸಿಎಂ ಕೇಶುಭಾಯಿ ಪಟೇಲ್ ಅವರ ಗುಜರಾತ್ ಪರಿವರ್ತನ್ ಪಕ್ಷಕ್ಕೆ ಸೇರ್ಪಡೆಯಾದರು. ಮತ್ತೆ ಬಿಜೆಪಿಗೆ ಮರಳಿದ ಅವರು ಪ್ರಸ್ತುತ ಗುಜರಾತ್ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ.
4.ಪ್ರಫುಲ್ ಖೋಡಭಾಯಿ ಪಟೇಲ್
ಪ್ರಧಾನಿ ನರೇಂದ್ರ ಮೋದಿಗೆ ಬಹಳ ಆಪ್ತರೆಂದು ಪರಿಗಣಿಸಲ್ಪಟ್ಟ ಪ್ರಫುಲ್ ಖೋಡಭಾಯಿ ಪಟೇಲ್ (63) ಅವರು 2010ರಲ್ಲಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗೃಹ ಸಚಿವರಾಗಿದ್ದರು. ಹೀಗಾಗಿ ಇವರನ್ನು ಕೂಡ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆಯಿದೆ.
5. ಸಿ.ಆರ್.ಪಾಟಿಲ್
ಗುಜರಾತ್ನ ನವಸರಿ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಿ.ಆರ್.ಪಾಟಿಲ್ (66) ಅವರು ಕಳೆದ ಜುಲೈನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಇವರು ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ. ಮಹಾರಾಷ್ಟ್ರದ ಜಲಗಾಂವ್ ಮೂಲದ ಪಾಟೀಲ್ ರಾಜಕೀಯಕ್ಕೆ ಬರುವ ಮುನ್ನ ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.