ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವಧಿ ಫೆಬ್ರವರಿ 15 ರಂದು ಮುಕ್ತಾಯವಾಗುತ್ತಿದ್ದು, ಈ ಸ್ಥಾನವನ್ನು ಯಾರಿಗೆ ನೀಡಬೇಕೆಂಬುದು ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ.
ಹೆಚ್ಚು ಅನುಭವ ಹೊಂದಿರುವ ಹಾಗೂ ರಾಜ್ಯಸಭೆಯಲ್ಲಿ ಏರುಧ್ವನಿಯಲ್ಲಿ ಮಾತನಾಡುವ ವ್ಯಕ್ತಿಯನ್ನು ಕಾಂಗ್ರೆಸ್ ಹುಡುಕುತ್ತಿದೆ. ಕೈ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಆನಂದ್ ಶರ್ಮಾ, ದಿಗ್ವಿಜಯ್ ಸಿಂಗ್, ಪಿ ಚಿದಂಬರಂ ಅವರ ಹೆಸರುಗಳು ಕೇಳಿ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಅದರಲ್ಲಿಯೂ ಈ ಸ್ಥಾನವನ್ನು ಕಳೆದ ಆರು ವರ್ಷಗಳಿಂದ ಸಕ್ರಿಯರಾಗಿರುವ ರಾಜ್ಯಸಭೆಯ ಡೆಪ್ಯುಟಿ ಪ್ರತಿಪಕ್ಷ ನಾಯಕ ಆನಂದ್ ಶರ್ಮಾ ಅವರಿಗೆ ಕಾಂಗ್ರೆಸ್ ನೀಡಬಹುದು ಎಂದು ಹೇಳಲಾಗಿದೆ. ಆದರೆ, ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸ್ಥಾನದಿಂದ ಸೋನಿಯಾ ಗಾಂಧಿ ಕೆಳಗಿಳಿಯಬೇಕು, ದಕ್ಷ ನಾಯಕರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಪತ್ರ ಬರೆದ 23 ನಾಯಕರ ತಂಡದಲ್ಲಿ ಶರ್ಮಾ ಕೂಡ ಇದ್ದರು. ಹೀಗಾಗಿ ಇದು ಆನಂದ್ ಶರ್ಮಾರಿಗೆ ಮುಳುವಾಗಬಹುದು.
ಇದನ್ನೂ ಓದಿ: ದೇಶದ ಸಾರ್ವಭೌಮತ್ವ ರಕ್ಷಣೆಗೆ ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧ: ರಾಜನಾಥ್ ಸಿಂಗ್
ಅನುಭವದ ಆಧಾರದ ಮೇಲೆ ಚಿದಂಬರಂ, ಹಿಂದಿ ಭಾಷಾ ವಿಚಾರದಲ್ಲಿ ದಿಗ್ವಿಜಯ್ ಸಿಂಗ್, ವಿಶ್ವಾಸಾರ್ಹ ನಾಯಕ ಹಾಗೂ ರಾಹುಲ್ ಗಾಂಧಿಗೆ ಹತ್ತಿರವಾಗಿರುವ ಕಾರಣ ಮಲ್ಲಿಕಾರ್ಜುನ್ ಖರ್ಗೆಗೆ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗುವ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.