ಕರ್ನಾಟಕ

karnataka

ETV Bharat / bharat

ಯಾರು ಈ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್? ಭಾರತ ಈತನನ್ನು ಉಗ್ರರ ಪಟ್ಟಿಗೆ ಸೇರಿಸಿದ್ದೇಕೆ? ಸಂಪೂರ್ಣ ಮಾಹಿತಿ

ಭಾರತ ಮತ್ತು ಕೆನಡಾ ದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣನಾಗಿರುವ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್​ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರು ಈ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್
ಯಾರು ಈ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್

By ETV Bharat Karnataka Team

Published : Sep 20, 2023, 10:39 AM IST

ನವದೆಹಲಿ: ಜೂನ್​ 18ರಂದು ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಇದೀಗ ಭಾರತ-ಕೆನಡಾ ನಡುವೆ ಭಾರಿ ವಿವಾದ ಹುಟ್ಟುಹಾಕಿದೆ. ಕೆನಡಾದ ಸರ್ರೆಯಲ್ಲಿ ನಿಜ್ಜರ್‌ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಈ ಘಟನೆ ಉಭಯ ದೇಶಗಳ ನಡುವೆ ಇದೀಗ ರಾಜತಾಂತ್ರಿಕ ಗುದ್ದಾಟಕ್ಕೆ ಕಾರಣವಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡುತ್ತಾ, ಭಾರತದ ಏಜೆಂಟ್‌​ಗಳು ನಿಜ್ಜರ್​ನನ್ನು ಹತ್ಯೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದಾದ ನಂತರ ಮಹತ್ವದ ಬೆಳವಣಿಗೆಯಲ್ಲಿ ಕೆನಡಾದಲ್ಲಿನ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಛಾಟನೆ ಮಾಡಿದ್ದರು. ಆದರೆ ಈ ಆರೋಪವನ್ನು ಭಾರತ ತಿರಸ್ಕರಿಸಿತ್ತು. ಜೊತೆಗೆ, ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿ ತಕ್ಕ ಪ್ರತ್ಯುತ್ತರ ನೀಡಿತ್ತು. ಇಷ್ಟೆಲ್ಲಾ ವಿವಾದದ ಕೇಂದ್ರಬಿಂದು ಈ ಖಲಿಸ್ತಾನಿ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್.

ನಿಜ್ಜರ್ ಯಾರು?: ಪಂಜಾಬ್ ಪೊಲೀಸರ ದಾಖಲೆಯಂತೆ, ಹರ್ದೀಪ್ ಸಿಂಗ್ ನಿಜ್ಜರ್ ಜಲಂಧರ್‌ನ ಭರ್ಸಿಂಗ್ ಪುರ ಗ್ರಾಮದ ನಿವಾಸಿ. 1997ರಲ್ಲಿ ಕೆನಡಾ ದೇಶಕ್ಕೆ ತೆರಳಿದ್ದ. ಅಲ್ಲಿ ತಲುಪಿದ ನಂತರ, ಪ್ಲಂಬರ್ ವೃತ್ತಿ ಪ್ರಾರಂಭಿಸಿದ್ದ. ಪಂಜಾಬ್ ರಾಜ್ಯವನ್ನು ಭಾರತದಿಂದ ಪ್ರತ್ಯೇಕಿಸಲು ಸಂಚು ರೂಪಿಸುತ್ತಿರುವ ಖಲಿಸ್ತಾನಿ ಉಗ್ರ ತಂಡ ಸೇರಿಕೊಂಡಿದ್ದಾನೆ. ಇದೇ ಹಿನ್ನೆಲೆಯಲ್ಲಿ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಎಂಬ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಖಲಿಸ್ತಾನಿ ಬೆಂಬಲಿಗರನ್ನು ಗುರುತಿಸಿ, ತರಬೇತಿ ನೀಡುವುದು ಮತ್ತು ಧನಸಹಾಯ ನೀಡಲು ಆರಂಭಿಸಿದ್ದಾನೆ. ನೈಜೀರಿಯಾದ ಭಯೋತ್ಪಾದಕ ಸಂಘಟನೆ 'ಸಿಕ್ ಫಾರ್ ಜಸ್ಟೀಸ್' (SJF) ಜೊತೆಗೂ ಈತ ಸಂಪರ್ಕ ಬೆಳೆಸಿದ್ದ. (ಭಾರತದಲ್ಲಿ SJF ಸಂಘಟನೆಯನ್ನು ನಿಷೇಧಿಸಲಾಗಿದೆ) ಈ ಮೂಲಕ ಭಾರತ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. 2020ರಲ್ಲಿ ಈತನನ್ನು ಭಾರತ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸಿತ್ತು.

ಇದನ್ನೂ ಓದಿ:ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಭಾರತದ ರಾಜತಾಂತ್ರಿಕ ಅಧಿಕಾರಿ ಉಚ್ಛಾಟಿಸಿದ ಕೆನಡಾ

ಪಂಜಾಬ್​ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2018ರಲ್ಲಿ ಹರ್ದೀಪ್​ ಸಿಂಗ್​ ನಿಜ್ಜರ್‌ ಸೇರಿ ಕೆಲವು ವಾಂಟೆಡ್ ವ್ಯಕ್ತಿಗಳ ಪಟ್ಟಿಯನ್ನು ಕೆನಡಾ ಪ್ರಧಾನಿಗೆ ನೀಡಿದ್ದರು. 2007ರಲ್ಲಿ ಲೂಧಿಯಾನದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣದಲ್ಲಿ ನಿಜ್ಜರ್ ಭಾಗಿಯಾಗಿದ್ದ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿ, 42 ಜನರು ಗಾಯಗೊಂಡಿದ್ದರು. 2010ರಲ್ಲಿ ಪಟಿಯಾಲದ ದೇವಸ್ಥಾನದ ಮೇಲೆ ನಡೆದ ದಾಳಿಯ ಹಿಂದೆ ನಿಜ್ಜರ್ ಕೈವಾಡ ಪತ್ತೆಯಾಗಿತ್ತು. 2015ರಲ್ಲಿ ಹಿಂದೂ ಮುಖಂಡರ ಮೇಲೆ ಹಲ್ಲೆ ನಡೆಸಲು ನಿಜ್ಜರ್​ ಸಂಚು ರೂಪಿಸಿದ್ದೂ ಕೂಡಾ ಬೆಳಕಿಗೆ ಬಂದಿತ್ತು. 2015 ಮತ್ತು 2016ರಲ್ಲಿ ನಿಜ್ಜರ್ ಮೇಲೆ ಲುಕ್‌ಔಟ್ ಮತ್ತು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ:ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಕೆನಡಾ ಪ್ರಧಾನಿ ಜಸ್ಟಿನ್​ ಟ್ರೂಡೊ ಆರೋಪ ತಿರಸ್ಕರಿಸಿದ ಭಾರತ

2018ರಲ್ಲಿ ಪಂಜಾಬ್​ನಲ್ಲಿ ನಡೆದ ಆರ್‌ಎಸ್‌ಎಸ್ ನಾಯಕರ ಹತ್ಯೆಯಲ್ಲಿ ನಿಜ್ಜರ್ ಭಾಗಿಯಾಗಿದ್ದಾನೆ. 2022ರಲ್ಲಿ ಜಲಂಧರ್‌ನಲ್ಲಿ ಅರ್ಚಕನನ್ನು ಕೊಲ್ಲಲು ಈತ ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ಮೋಸ್ಟ್‌ ವಾಂಟೆಡ್​ ಪಟ್ಟಿಯಲ್ಲಿ ಈತನ ಹೆಸರು ಸೇರಿಸಲಾಗಿದೆ. ಅಲ್ಲದೇ ನಿಜ್ಜರ್​ನನ್ನು ಭಾರತಕ್ಕೆ ಹಸ್ತಾಂತರಿಸುವಂತೆಯೂ ಕೆನಡಾ ದೇಶಕ್ಕೆ ಮನವಿ ಮಾಡಲಾಗಿತ್ತು. ಇದರ ಮಧ್ಯೆಯೇ ಈ ವರ್ಷದ ಜೂನ್ 18ರಂದು ಸರ್ರೆಯಲ್ಲಿ ಉಗ್ರ ಹರ್ದೀಪ್​ ಸಿಂಗ್​ನನ್ನು ಅಪರಿಚಿತರು ಗುಂಡಿಕ್ಕೆ ಹತ್ಯೆ ಮಾಡಿದ್ದರು. ಈ ಹತ್ಯೆಯನ್ನು ಭಾರತದ ಏಜೆಂಟ್​ ನಡೆಸಿದ್ದಾರೆ ಎಂದು ಕೆನಡಾ ಸರ್ಕಾರ ಆರೋಪಿಸಿದೆ.​

ಇದನ್ನೂ ಓದಿ:ಏಟಿಗೆ ಇದಿರೇಟು! ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದ ಭಾರತ

ABOUT THE AUTHOR

...view details