ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹಾಗೂ ಮಂಡಿ ವ್ಯವಸ್ಥೆ ಅಂತ್ಯವಾಗಲಿದೆ ಎಂದು ಎಲ್ಲಿ ಬರೆಯಲಾಗಿದೆ ಎನ್ನುವುದನ್ನು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಾಯಕರು ತೋರಿಸಲಿ ಎಂದು ರಾಜ್ಯ ಹಣಕಾಸು ಖಾತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸವಾಲೆಸೆದಿದ್ದಾರೆ.
ಕಳೆದೆರಡು ತಿಂಗಳಿನಿಂದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಪ್ಪು ಮಾಹಿತಿ ನೀಡಿ ಅನ್ನದಾತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಚಿವರು ಆರೋಪಿಸುತ್ತಾ ಬಂದಿದ್ದಾರೆ. ಇಂದಿನ ರಾಜ್ಯಸಭೆ ಕಲಾಪದಲ್ಲಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಅನುರಾಗ್ ಠಾಕೂರ್, ನಾವು ಭಾರತವನ್ನು ಎತ್ತರಕ್ಕೆ ಕರೆದೊಯ್ಯಲು, ದೇಶದ ಅಭಿವೃದ್ಧಿಗಾಗಿ ಬದ್ಧರಾಗಿದ್ದೇವೆ ಎಂದರು. ಕೃಷಿ ಕಾನೂನುಗಳಲ್ಲಿ ಎಂಎಸ್ಪಿ ಹಾಗೂ ಮಂಡಿ ವ್ಯವಸ್ಥೆ ಕೊನೆಗೊಳ್ಳಲಿದೆ ಎಂದು ಎಲ್ಲಿ ಬರೆಯಲಾಗಿದೆ ಎಂದು ಪ್ರಶ್ನಿಸಿದರು.