ನವದೆಹಲಿ:ಕೇಂದ್ರ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ದೇಶದ ಜನರಿಗೆ ಬೂಸ್ಟರ್ ಡೋಸ್ ಯಾವಾಗ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಜನಸಂಖ್ಯೆಯ ಬಹುಪಾಲು ಜನರಿಗೆ ಇನ್ನೂ ಕೋವಿಡ್ ಲಸಿಕೆ ನೀಡಿಲ್ಲ. ಸರ್ಕಾರ ಯಾವಾಗ ಬೂಸ್ಟರ್ ಡೋಸ್ ನೀಡುವ ಕಾರ್ಯವನ್ನು ಪ್ರಾರಂಭಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳು ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ರಾಹುಲ್ ಬೂಸ್ಟರ್ ಡೋಸ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್ ಮಾಹಿತಿ ಹಂಚಿಕೊಂಡಿರುವ ರಾಹುಲ್, ನಿತ್ಯ 55.3 ಮಿಲಿಯನ್(5 ಕೋಟಿ 50 ಲಕ್ಷದ 30 ಸಾವಿರ) ಡೋಸ್‌ಗಳ ಕೊರತೆಯಿದೆ. 2021ರ ಡಿಸೆಂಬರ್ ವೇಳೆಗೆ ಜನಸಂಖ್ಯೆಯ ಶೇ.42 ರಷ್ಟು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.
3ನೇ ಅಲೆ ತಡೆಯಬೇಕಿರುವ ಹಿನ್ನೆಲೆಯಲ್ಲಿ 2021ರ ಡಿಸೆಂಬರ್ ವೇಳೆಗೆ ಶೇ.60 ರಷ್ಟು ಮಂದಿಗೆ ಎರಡೂ ಡೋಸ್ ನೀಡುವ ಗುರಿ ನಿಗದಿಪಡಿಸಲಾಗಿದೆ. ಅಗತ್ಯ ಇರುವ ವ್ಯಾಕ್ಸ್ ದರ (1 ದಿನದ ವ್ಯಾಕ್ಸಿನೇಷನ್) 61 ಮಿಲಿಯನ್. ಆದರೆ, ಕಳೆದ 7 ದಿನಗಳಲ್ಲಿ ಕೇವಲ 5.8 ಮಿಲಿಯನ್ ಗುರಿ ಸಾಧಿಸಲಾಗುತ್ತಿದೆ. ದೈನಂದಿನ ಕೊರತೆ 7 ದಿನಗಳಲ್ಲಿ 55.2 ಮಿಲಿಯನ್ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಸದ್ಯ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದು, ಕೋವಿಡ್ ಉಲ್ಬಣವನ್ನು ತಡೆಗಟ್ಟಲು ವ್ಯಾಕ್ಸಿನೇಷನ್ ವೇಗಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೆಪ್ಟೆಂಬರ್ 19 ರಂದು ಭಾರತವು ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಲಸಿಕೆ ನೀಡಿದಾಗ ಈವೆಂಟ್ ಈಗ ಮುಗಿದಿದೆ ಎಂದು ಗಾಂಧಿ ಸರ್ಕಾರವನ್ನು ಲೇವಡಿ ಮಾಡಿದ್ದರು.
ಇದನ್ನೂ ಓದಿ:2014ಕ್ಕೂ ಮೊದಲು ಹತ್ಯೆ ಪದವನ್ನು ಪ್ರಾಯೋಗಿಕವಾಗಿ ಕೇಳಿರಲಿಲ್ಲ: ಧನ್ಯವಾದ ಮೋದಿಜಿ ಎಂದು ರಾಹುಲ್ ಲೇವಡಿ