ಬೆಂಗಳೂರು:ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಒಂದು ಕಾಲದಲ್ಲಿ ಅಮೆರಿಕದಲ್ಲಿ ಕಿಟಕಿಯಿಲ್ಲದ ಸ್ಟೋರ್ ರೂಂನಲ್ಲಿ ದೊಡ್ಡ ಪೆಟ್ಟಿಗೆಯ ಮೇಲೆ ಮಲಗಲು ಅಲ್ಲಿನ ಉದ್ಯಮಿಯೊಬ್ಬರು ಸೂಚಿಸಿದ್ದರಂತೆ. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರ ಜೀವನದ ಬಗ್ಗೆ ಇಂತಹ ಅನೇಕ ಆಸಕ್ತಿದಾಯಕ ವಿಷಯಗಳು ಪುಸ್ತಕದಿಂದ ಬಹಿರಂಗವಾಗಿವೆ.
ಇಂಡಿಯನ್-ಅಮೆರಿಕನ್ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು 'ಆ್ಯನ್ ಅನ್ಕಾಮನ್ ಲವ್: ದಿ ಅರ್ಲಿ ಲೈಫ್ ಆಫ್ ಸುಧಾ ಮತ್ತು ನಾರಾಯಣ ಮೂರ್ತಿ' (An Uncommon Love: The Early Life of Sudha and Narayana Murthy) ಎಂಬ ಪುಸ್ತಕ ಹೊರತಂದಿದ್ದಾರೆ. ಇದರಲ್ಲಿ ನಾರಾಯಣ ಮೂರ್ತಿ ದಂಪತಿ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಪುಸ್ತಕದಲ್ಲಿ ಅವರು ತೆರೆದಿಟ್ಟಿದ್ದಾರೆ.
ಹಲವು ವರ್ಷಗಳ ಹಿಂದೆ ಎಂದರೆ ಇನ್ಫೋಸಿಸ್‌ನ ಆರಂಭದ ದಿನಗಳಲ್ಲಿ ನಾರಾಯಣ ಮೂರ್ತಿ ಅವರು ಕೆಲಸದ ನಿಮಿತ್ತ ಮತ್ತು ತಮ್ಮ ಕ್ಲೈಂಟ್ ಒಬ್ಬರನ್ನು ಭೇಟಿಯಾಗಲು ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಾರಾಯಣ ಮೂರ್ತಿ ಅವರಿಗೆ ಸ್ಟೋರ್ ರೂಂನ ಕಹಿ ಅನುಭವ ಆಗಿತ್ತು.
ಇಂತಹ ಘಟನೆಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ 'ಡೇಟಾ ಬೇಸಿಕ್ಸ್ ಕಾರ್ಪೊರೇಷನ್'ನ ಡಾನ್ ಲೈಲ್ಸ್ ಎಂಬ ಕ್ಲೈಂಟ್ ಅನೇಕ ಸಂದರ್ಭಗಳಲ್ಲಿ ನಾರಾಯಣ ಮೂರ್ತಿ ಅವರಿಗೆ ಕಠೋರವಾಗಿದ್ದರು. ಗ್ರಾಹಕರು ಆಗಾಗ್ಗೆ ಪಾವತಿಗಳನ್ನು ವಿಳಂಬಗೊಳಿಸುತ್ತಿದ್ದರು. ಈ ವಿಷಯದ ಬಗ್ಗೆ ನಾರಾಯಣ ಮೂರ್ತಿ ಅವರು ಬಗ್ಗುತ್ತಿರಲಿಲ್ಲ. ಇದೇ ಕಾರಣಕ್ಕೆ ಮೂರ್ತಿ ಅವರು ಲೈಲ್ಸ್ ಅವರಿಗೆ ಟಾರ್ಗೆಟ್ ಆಗುತ್ತಿದ್ದರು.