ನವದೆಹಲಿ: ಅಕ್ಟೋಬರ್ 4ರ ಸಂಜೆ ವೇಳೆ ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದ್ದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ಜಗತ್ತಿನ ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿತ್ತು.
ವಾಟ್ಸ್‌ಆ್ಯಪ್ ಸ್ಥಗಿತವನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್ ಡಿಟೆಕ್ಟರ್ ಮಾಹಿತಿ ಪ್ರಕಾರ, "ಶೇ.40 ರಷ್ಟು ಬಳಕೆದಾರರಿಗೆ ಆ್ಯಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಶೇ.30 ರಷ್ಟು ಜನರಿಗೆ ಸಂದೇಶ ಕಳುಹಿಸಲು ತೊಂದರೆಯಾಗಿದ್ದು, ಶೇ.22 ರಷ್ಟು ಜನರು ವೆಬ್ ಆವೃತ್ತಿಯಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ" ಎಂದು ತಿಳಿಸಿದೆ.
ಬಹುಬಳಕೆಯ ಸಾಮಾಜಿಕ ವೇದಿಕೆಯಲ್ಲಿ ಸಮಸ್ಯೆಗಳು ಕಂಡುಬರುತ್ತಿದ್ದಂತೆ ಟ್ವಿಟರ್‌ನಲ್ಲಿ ಮಿಮ್ಸ್ ಮತ್ತು ಜಿಐಎಫ್ಗಳೊಂದಿಗೆ ಜನರು ವರದಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಪಂಚದಾದ್ಯಂತ ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ, ಫೇಸ್‌ಬುಕ್ ಡೌನ್.. ಬಳಕೆದಾರರ ಪರದಾಟ
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಮಸ್ಯೆ ಕಂಡುಬಂದ ವಿಚಾರ ಟ್ವಿಟರ್ ಟ್ರೆಂಡಿಂಗ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಹಲವಾರು ಟ್ರೋಲ್, ಮಿಮ್ಸ್ಗಳು ಕೂಡ ಕ್ರಿಯೇಟ್ ಆಗಿವೆ. ಟ್ವಿಟರ್ ಟ್ರೆಂಡಿಂಗ್ನ ಟೆಕ್ನಾಲಜಿ ವಿಭಾಗದ 4 ಮತ್ತು 5ನೇ ಸ್ಥಾನದಲ್ಲಿ FACEBOOK and INSTAGRAM ಮತ್ತು #facebookdown ಇದೆ. ಇದರ ಕುರಿತು ಸುದ್ದಿ ಪ್ರಸಾರವಾಗುವಷ್ಟರಲ್ಲಿ ಕ್ರಮವಾಗಿ 88.1k ಮತ್ತು 69.5k ಟ್ವೀಟ್ಗಳಾಗಿವೆ. ಇನ್ನು ಟ್ರೆಂಡಿಂಗ್ 9ರಲ್ಲಿ ಮಾರ್ಕ್ ಜುಕರ್ಬರ್ಗ್ ಹೆಸರಿದ್ದು, ಈ ಬಗ್ಗೆ 38.2k ಟ್ವೀಟ್ಗಳು ಆಗಿವೆ. #serverdown ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.