ನವದೆಹಲಿ : ಮೆಟಾ - ಮಾಲೀಕತ್ವದ ವಾಟ್ಸ್ ಆ್ಯಪ್ ಜನವರಿ ತಿಂಗಳಲ್ಲಿ ಭಾರತದಲ್ಲಿ 29 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. 2021 ರ ಹೊಸ ಐಟಿ ನಿಯಮಗಳ ಪ್ರಕಾರ ಕಳೆದ ವರ್ಷ ಡಿಸೆಂಬರ್‌ನಲ್ಲಿ ದೇಶದಲ್ಲಿ 36.77 ಲಕ್ಷ ವಾಟ್ಸ್ಆ್ಯಪ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ತಿಂಗಳು ನಿರ್ಬಂಧಿಸಲಾದ ಖಾತೆಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಜನವರಿ 1 ಮತ್ತು ಜನವರಿ 31 ರ ನಡುವೆ, 2,918,000 ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇವುಗಳ ಪೈಕಿ 1,038,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬರುವ ಮೊದಲೇ ಮುನ್ನೆಚ್ಚರಿಕೆಯಾಗಿ ನಿಷೇಧಿಸಲಾಗಿದೆ ಎಂದು ಕಂಪನಿಯು ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ ಆ್ಯಪ್ ಜನವರಿಯಲ್ಲಿ ದೇಶದಲ್ಲಿ 1,461 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು 195 ಕ್ರಿಯೆಯ ದಾಖಲೆಗಳು ಆಗಿದೆ. ಈ ವರದಿಯು ಬಳಕೆದಾರರಿಂದ ಬಂದ ದೂರುಗಳ ವಿವರಗಳನ್ನು ಮತ್ತು ವಾಟ್ಸ್ ಆ್ಯಪ್ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಜೊತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆ ಎದುರಿಸಲು ವಾಟ್ಸ್ಆ್ಯಪ್ ತನ್ನ ಸ್ವಂತ ನಿರ್ಬಂಧ ಕ್ರಮಗಳನ್ನು ಒಳಗೊಂಡಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಏತನ್ಮಧ್ಯೆ, ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಂಗಳವಾರ ಕುಂದುಕೊರತೆ ಮೇಲ್ಮನವಿ ಸಮಿತಿಯೊಂದನ್ನು (ಜಿಎಸಿ) Grievance Appellate Committee -GAC) ಆರಂಭಿಸಿದ್ದಾರೆ. ಇದು ಕಂಟೆಂಟ್ ಮತ್ತು ಇತರ ಸಮಸ್ಯೆಗಳ ಬಗ್ಗೆ ಬಳಕೆದಾರರ ದೂರುಗಳನ್ನು ಪರಿಶೀಲಿಸುತ್ತದೆ.