ನವದೆಹಲಿ: ಹೊಸ ಐಟಿ ನಿಯಮಗಳು 2021 ರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ಒಡೆತನದ ಕಂಪನಿ ವಾಟ್ಸ್ಆ್ಯಪ್ ತಿಳಿಸಿದೆ.
ಆಗಸ್ಟ್ 1 ರಿಂದ ಆಗಸ್ಟ್ 31 ರ 30 ದಿನಗಳ ಅವಧಿಗೆ ಕಂಪನಿಯು ತನ್ನ ಎರಡನೇ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದಾಗ ಈ ಅಂಶ ಬೆಳಕಿಗೆ ಬಂದಿದೆ. ವರದಿ ಪ್ರಕಾರ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021 ರ ಅಡಿ ಭಾರತದ ಬಳಕೆದಾರರಿಂದ ಇ-ಮೇಲ್ ಮೂಲಕ ಸ್ವೀಕರಿಸಿದ 420 ಕುಂದುಕೊರತೆಗಳನ್ನು ವಾಟ್ಸ್ಆ್ಯಪ್ ಸ್ವೀಕರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಾಟ್ಸ್ಆ್ಯಪ್ ವಕ್ತಾರರು, "ಈ ಬಳಕೆದಾರರ ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸ್ಆ್ಯಪ್ ತೆಗೆದುಕೊಂಡ ಕ್ರಮವನ್ನು ಒಳಗೊಂಡಿದೆ.
ಜೊತೆಗೆ ವಾಟ್ಸ್ಆ್ಯಪ್ನಲ್ಲಿ ಸಂಭವಿಸುತ್ತಿರುವ ದುರುಪಯೋಗ ತಡೆಗಟ್ಟುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವುದರತ್ತ ನಾವು ಹೆಚ್ಚು ಗಮನ ಹರಿಸಿದ್ದೇವೆ. ಅಸಹಜವಾದ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ನಾವು ಸುಧಾರಿತ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್ಆ್ಯಪ್ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ.