ಮಹಿಳೆಯರಿಗೆ 40 ವರ್ಷ ತುಂಬಿದಾಗ, ದೇಹಕ್ಕೆ ಅನೇಕ ಅಗತ್ಯ ಪೋಷಕಾಂಶಗಳು ಬೇಕಾಗುತ್ತವೆ. ಆದ್ದರಿಂದ, ಸರಿಯಾದ ಆಹಾರದ ಅಗತ್ಯವಿದೆ. ಎಂಜಿಎಂ ವೈದ್ಯಕೀಯ ಕಾಲೇಜು ಮತ್ತು ನೆಹರೂ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪೌಷ್ಟಿಕ ತಜ್ಞೆ ಡಾ.ಸಂಗೀತಾ ಮಾಲು, 40ರ ನಂತರ ಮಹಿಳೆಯರ ಆಹಾರ ಕ್ರಮ ಹೇಗಿರಬೇಕು ಎಂಬುದರ ಕುರಿತು ಈಟಿವಿ ಭಾರತ ಸುಖಿಭವ ತಂಡದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ತಿನ್ನುವ ಆಹಾರದ ಮೇಲಿರಲಿ ಗಮನ:
ಡಾ. ಸಂಗೀತಾ ಮಾಲು ಹೇಳುವಂತೆ, ಮಹಿಳೆಯರು 40 ವರ್ಷ ದಾಟಿದ ತಕ್ಷಣ ಅವರ ದೇಹದ ಚಯಾಪಚಯ ಕ್ರಿಯೆ ಕಡಿಮೆಯಾಗುವುದರ ಜೊತೆಗೆ ಅವರ ಹಾರ್ಮೋನ್ ಮಟ್ಟವೂ ಕಡಿಮೆಯಾಗುತ್ತದೆ. ಅವರ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಇದರೊಂದಿಗೆ, ಋತುಬಂಧವು ಸಾಮಾನ್ಯವಾಗಿ 45 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೂ ಕೆಲವು ಮಹಿಳೆಯರಲ್ಲಿ, 45 ವರ್ಷಕ್ಕಿಂತ ಮುಂಚೆಯೇ ಋತುಬಂಧದ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದ, ಇವುಗಳನ್ನು ಮತ್ತು ಇತರ ಅನೇಕ ರೀತಿಯ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಲು, ಮಹಿಳೆಯರು ತಾವು ತಿನ್ನುವುದು ಅಥವಾ ಕುಡಿಯುವುದರ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. ಅವರು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಆದರೆ ಕ್ಯಾಲ್ಸಿಯಂ, ಕಬ್ಬಿಣ, ಪ್ರೊಟೀನ್ ಮತ್ತು ಫೈಬರ್ ಅಧಿಕವಾಗಿರಬೇಕು ಎಂಬುದನ್ನು ಅವರು ನೆನಪಿನಲ್ಲಿಡಬೇಕು.
ನಿಯಂತ್ರಿತ ಮತ್ತು ಸಮತೋಲಿತ ಆಹಾರ:
40 ವರ್ಷ ವಯಸ್ಸಿನ ನಂತರ, ದೇಹದ ಚಯಾಪಚಯವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ನಿಯಂತ್ರಿತ ಆಹಾರವನ್ನು ಹೊಂದಿರುವುದು ಮುಖ್ಯವಾಗಿದೆ. ಈ ವಯಸ್ಸಿನಲ್ಲಿ, ಮಹಿಳೆಯರು ಕೆಫಿನ್ ಮತ್ತು ಅಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು. ಏಕೆಂದರೆ ಕೆಫಿನ್ ಮತ್ತು ಅಲ್ಕೋಹಾಲ್ ಋತುಬಂಧವನ್ನು ಉತ್ತೇಜಿಸುತ್ತದೆ. ಮದ್ಯವು ಹೃದಯ ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ.
ಇದರ ಹೊರತಾಗಿ, ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದರ ಹಿಂದಿರುವ ಕಾರಣವೆಂದರೆ, ಈ ವಯಸ್ಸಿನಲ್ಲಿ ನಮ್ಮ ದೇಹದ ಕಾರ್ಯಗಳು ನಿಧಾನವಾಗಲು ಆರಂಭವಾಗುವುದರಿಂದ, ಯಾವುದೇ ರೀತಿಯ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಅಜೀರ್ಣಕ್ಕೆ ಕಾರಣವಾಗಬಹುದು. ಆದ್ದರಿಂದ, ಆಹಾರವನ್ನು ಜೀರ್ಣಿಸಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇವಿಸಬೇಕು.
ಆಹಾರದಲ್ಲಿ ಕ್ಯಾಲೋರಿ ಮತ್ತು ಕೊಬ್ಬನ್ನು ಕಡಿಮೆ ಮಾಡಿ:
ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಯವಾಗಲಿ, ಆಹಾರದಲ್ಲಿ ಅಸಮತೋಲನವಾಗಲಿ, ಹಾರ್ಮೋನುಗಳಲ್ಲಿ ಸಮಸ್ಯೆ ಇರಲಿ ಅಥವಾ ಯಾವುದೇ ರೋಗವಿರಲಿ, 40 ವರ್ಷ ದಾಟಿದ ನಂತರ ಮಹಿಳೆಯರಲ್ಲಿ ವಿವಿಧ ಕಾರಣಗಳಿಂದ ತೂಕ ಹೆಚ್ಚಾಗುವ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸುತ್ತದೆ ಎಂದು ಡಾ.ಮಾಲು ಹೇಳುತ್ತಾರೆ. ಆದ್ದರಿಂದ, ಕ್ಯಾಲೋರಿ ಸೇವನೆಯ ಪ್ರಮಾಣವನ್ನು ನಿಯಂತ್ರಿಸುವುದು ಮುಖ್ಯ.
ನಮ್ಮ ದೇಹದಲ್ಲಿನ ಕ್ಯಾಲೋರಿಗಳನ್ನು ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ಪಡೆಯಲಾಗುತ್ತದೆ. ಈ ವಯಸ್ಸಿನಲ್ಲಿ, ಮಹಿಳೆಯರಿಗೆ ದಿನಕ್ಕೆ ಸುಮಾರು 2000 ರಿಂದ 2500 Kcal ಅಗತ್ಯವಿದೆ. ಕೊಬ್ಬು ಅಂದರೆ ತುಪ್ಪ/ಎಣ್ಣೆಯನ್ನು ನಮ್ಮ ಭಾರತೀಯ ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ದಿನಕ್ಕೆ 25 ರಿಂದ 30 ಗ್ರಾಂ ಎಣ್ಣೆ ಅಥವಾ ತುಪ್ಪದ ಸೇವನೆಯು 40 ವರ್ಷದ ನಂತರ ಮಹಿಳೆಯರ ದೇಹಕ್ಕೆ ಬಹಳ ಮುಖ್ಯವಾಗಿದೆ. ಉಳಿದ ಕೊಬ್ಬಿನ ಅಗತ್ಯ ಪ್ರಮಾಣವನ್ನು ನಾವು ತಿನ್ನುವ ಇತರ ಆಹಾರಗಳಿಂದ ಪಡೆಯಲಾಗುತ್ತದೆ.
ಪ್ರೊಟೀನ್ಯುಕ್ತ ಆಹಾರ ಸೇವನೆ:
ಇದು ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ ಎಂದು ಡಾ. ಮಾಲು ಹೇಳುತ್ತಾರೆ. ಸಾಮಾನ್ಯವಾಗಿ 40 ವರ್ಷದ ನಂತರ, ಪ್ರೋಟೀನ್ ಕೊರತೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲಿಯೂ ಆರಂಭವಾಗುತ್ತದೆ. ಈ ಸಮಯದಲ್ಲಿ, ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಪ್ರೊಟೀನ್ ಅಗತ್ಯವಿದೆ. ಪ್ರತಿ ಕೆ.ಜಿ ತೂಕಕ್ಕೆ 0.8 ರಿಂದ 1 ಗ್ರಾಂ ಪ್ರೋಟೀನ್ ಸೇವಿಸಬೇಕು. ಇದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಪದಾರ್ಥಗಳಿಂದ ಪಡೆಯಬಹುದು. ಆದರೆ ಸಸ್ಯಾಹಾರದಿಂದ ಪಡೆದ ಪ್ರೊಟೀನ್ ತುಲನಾತ್ಮಕವಾಗಿ ಉತ್ತಮವಾಗಿರುತ್ತದೆ. ಆದ್ದರಿಂದ ಇದಕ್ಕಾಗಿ, ಡೈರಿ ಉತ್ಪನ್ನಗಳಾದ ಹಾಲು, ಮೊಸರು, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬಹುದು.