ಚಂಡೀಗಢ: ಸುಪ್ರೀಂಕೋರ್ಟ್ ಸೂಚನೆಯಂತೆ ಚಂಡೀಗಢದಲ್ಲಿ 'ಆನಂದ್ ವಿವಾಹ ಕಾಯ್ದೆ 1909' ಜಾರಿಗೆ ಬಂದಿದೆ. ಇದರ ಪ್ರಕಾರ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು. ಮತ್ತೊಂದೆಡೆ ಈ ನೋಂದಣಿ ಸೌಲಭ್ಯವನ್ನು ಈಗ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದಲೂ ಪ್ರಾರಂಭಿಸಲಾಗಿದೆ. ಇದು ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿಯಾಗಿದೆ. 2018ರಲ್ಲಿ ಚಂಡೀಗಢ ಆಡಳಿತವು 'ಚಂಡೀಗಢ ಆನಂದ್ ವಿವಾಹ ನೋಂದಣಿ ನಿಯಮಗಳು 2018'ರ ಅನುಷ್ಠಾನಕ್ಕೆ ಸೂಚನೆ ನೀಡಿತ್ತು. ಆದರೆ ಈಗ ವಿವಾಹಗಳನ್ನು 'ಆನಂದ್ ವಿವಾಹ ಕಾಯ್ದೆ-1909'ರ ಅಡಿ ನೋಂದಾಯಿಸಲಾಗುತ್ತದೆ.
ಕಾಯಿದೆ ರಚನೆಯಾಗಿದ್ದು ಯಾವಾಗ?:ವಾಸ್ತವವಾಗಿ 'ಆನಂದ್ ವಿವಾಹ ಕಾಯಿದೆ' ಅಥವಾ 'ಆನಂದ್ ಕರಾಜ್'ನ್ನು 1909ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಇದಾದ ಬಳಿಕ ಹಲವೆಡೆ ಈ ಕಾಯ್ದೆ ಜಾರಿಯಾಗಲಿಲ್ಲ. ಆದರೆ ಸಿಖ್ ಸಮುದಾಯ ಈ ಕಾಯ್ದೆಯನ್ನು ಎಲ್ಲಾ ಧರ್ಮಗಳಲ್ಲಿ ಜಾರಿಗೆ ತರಲು ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಪ್ರಸ್ತುತ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪಂಜಾಬ್‌ನಲ್ಲಿ ಇದು ಇನ್ನೂ ಜಾರಿಯಾಗಬೇಕಿದೆ.
ಪಂಜಾಬ್ ಹೊರತುಪಡಿಸಿ, ಹರಿಯಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ದೇಶದ 22 ರಾಜ್ಯಗಳಲ್ಲಿ ಆನಂದ್ ವಿವಾಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. 'ಆನಂದ್ ಕರಾಜ್' ಕಾಯ್ದೆಯನ್ನು 2016ರಲ್ಲಿ ಅಂದಿನ ಅಕಾಲಿ-ಬಿಜೆಪಿ ಸರ್ಕಾರವು ಪಂಜಾಬ್‌ನಲ್ಲಿ ಪರಿಚಯಿಸಿತು. ಆದರೆ, ಕೆಲವು ಕಾರಣಗಳಿಂದ ಇದು ಇನ್ನೂ ಜಾರಿಗೆ ಬಂದಿಲ್ಲ. ಇದರ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರ ಮತ್ತು ನಂತರ ಚರಣ್ಜಿತ್ ಸಿಂಗ್ ಚನ್ನಿ ಕೂಡ ಅದನ್ನು ಕಾರ್ಯಗತಗೊಳಿಸಲು ವಿಫಲರಾದರು. ಆದಾಗ್ಯೂ, ಭಗವಂತ್ ಮಾನ್ ಅವರು ನವೆಂಬರ್ 2022 ರಲ್ಲಿ 'ಆನಂದ್ ಕರಾಜ್' ಕಾಯ್ದೆಯ ಅನುಷ್ಠಾನವನ್ನು ಘೋಷಿಸಿದರು.
ವಿವಾಹ ನೋಂದಣಿ ನಿಯಮಾಳಿಗಳೇನು?ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಅವರು ಚಂಡೀಗಢದಲ್ಲಿ ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಮಾತನಾಡಿದ್ದರು. ವಿವಾಹ ಕಾಯ್ದೆಗೆ ಸಂಬಂಧಿಸಿದಂತೆ ಚಂಡೀಗಢದ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರದಲ್ಲಿಯೇ ಜಾರಿಗೊಳಿಸುವಂತೆ ಕೋರಿದ್ದರು. ಆದ್ದರಿಂದ ವಿವಾಹ ನೋಂದಣಿಗಾಗಿ ವಧು ಮತ್ತು ವರನ ಗುರುತಿನ ಪುರಾವೆ ಮತ್ತು ಇಬ್ಬರ ವಯಸ್ಸಿನ ಪುರಾವೆಗಳು ಅಗತ್ಯವೆಂದು ಕೆಲವು ವಿಶೇಷ ಸೂಚನೆಗಳಿವೆ. ಇದಲ್ಲದೇ ಗುರುದ್ವಾರ ಸಾಹಿಬ್‌ನಿಂದ ಮದುವೆ ಪ್ರಮಾಣಪತ್ರದೊಂದಿಗೆ, ಇಬ್ಬರು ಸಾಕ್ಷಿಗಳು, ಮದುವೆಯ ಸಮಯದಲ್ಲಿ ಫೋಟೋಗಳು ಸಹ ಅಗತ್ಯವಿದೆ.
ಸುಪ್ರೀಂಕೋರ್ಟ್ ಅನುಮೋದನೆ: ಆನಂದ್ ವಿವಾಹ ಕಾಯಿದೆ-1909 ರ ಅಡಿಯಲ್ಲಿ ಸಿಖ್ಖರ ವಿವಾಹಗಳ ನೋಂದಣಿಗೆ ನಿಯಮಗಳನ್ನು ರೂಪಿಸುವ ನಿರ್ದೇಶನಗಳನ್ನು ನೀಡುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಪಟ್ಟಿ ಮಾಡಲು ಸಹ ಅನುಮೋದನೆ ನೀಡಿದೆ.