ಸಿರ್ಮೌರ್/ಶಿಮ್ಲಾ(ಹಿಮಾಚಲ ಪ್ರದೇಶ): ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಕಾರ್ತಿಕ ಮಾಸದಲ್ಲಿ ದೀಪಾವಳಿ ಆಚರಿಸುವುದಿಲ್ಲ. ಹೌದು, ಈ ಬಾರಿ ದೀಪಾವಳಿಯನ್ನು ದೇಶಾದ್ಯಂತ ನವೆಂಬರ್ 12 ರಂದು ಆಚರಿಸಲಾಗುತ್ತಿದೆ. ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ದೀಪಾವಳಿಯನ್ನು ಒಂದು ತಿಂಗಳ ನಂತರ ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ಇದನ್ನು 'ಬುಧಿ ದೀಪಾವಳಿ'(ಹಳೆಯ ದೀಪಾವಳಿ) ಎಂದು ಕರೆಯಲಾಗುತ್ತದೆ.
ಈ ಹಳೆಯ ದೀಪಾವಳಿಯನ್ನು ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುಮಾರು 140 ಪಂಚಾಯಿತಿಗಳು ಮತ್ತು ಕುಲ್ಲು, ಶಿಮ್ಲಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ. ಉತ್ತರಾಖಂಡದ ಜೌನ್ಸರ್, ಬಾವರ್ ಪ್ರದೇಶಗಳಲ್ಲಿ ಬುಧಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಬುಧಿ ದೀಪಾವಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ರಾವಣನನ್ನು ಸಂಹಾರ ಮಾಡಿ ಲಂಕೆಯಿಂದ ರಾಮನು ಅಯೋಧ್ಯೆಗೆ ಮರಳಿದ ಸಂಬಂಧ ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತದೆ. ಆದರೆ, ಈ ಪ್ರದೇಶಗಳಲ್ಲಿ ದೀಪಾವಳಿ ಆಚರಣೆ ವಿಷ್ಣುವಿನ ರಾಮ ಅವತಾರಕ್ಕಿಂತಲೂ ಹಳೆಯದು.
ಬುಧಿ ದೀಪಾವಳಿ ಹಿನ್ನೆಲೆ ಏನು?:ಈ ಕುರಿತು ಲೇಖಕ ದೀಪಕ್ ಶರ್ಮಾ ವಿವರಿಸಿದ್ದು ಹೀಗೆ, "ಈ ಹಬ್ಬದ ಹೆಸರು 'ಬುಧಿ ದಯಾವಾದಿ', ಇಲ್ಲಿ ದಯಾವಾದಿ ಎಂದರೆ ಹೋರಾಟ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ದೀಪಾವಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಆದರೆ ಬುಧಿ ದೀಪಾವಳಿಯನ್ನು ಒಂದು ತಿಂಗಳ ನಂತರ ಮಾರ್ಗಶಿರ್ಷ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿಯನ್ನು ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ವಾಸ್ತವವಾಗಿ, ಈ ಹಬ್ಬಕ್ಕೆ ಸಂಬಂಧಿಸಿದ ಕಥೆ ತ್ರೇತಾಯುಗಕ್ಕೂ ಹಳೆಯದು. ಅದಕ್ಕಾಗಿಯೇ ಇದನ್ನು ಹಳೆಯ ದೀಪಾವಳಿ ಎಂದು ಕರೆಯಲಾಗುತ್ತದೆ" ಎಂದು ತಿಳಿಸಿದರು.
"ಬುಧಿ ದೀಪಾವಳಿಯ ಕಥೆಯು ರಾಕ್ಷಸ ವೃತ್ರಾಸುರ ಮತ್ತು ಇಂದ್ರ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ. ದಧೀಚಿ ಎಂಬ ಮುನಿ ರಾಕ್ಷಸನನ್ನು ಕೊಲ್ಲಲು ತನ್ನ ದೇಹದ ಮೂಳೆಗಳನ್ನು (ಅಸ್ಥಿ) ಇಂದ್ರನಿಗೆ ದಾನ ಮಾಡಿದ್ದರು. ನಂತರ ಇಂದ್ರ ವಜ್ರಾಯುಧವನ್ನು ಈ ಮೂಳೆಗಳಿಂದ ತಯಾರಿ, ಅದರಿಂದ ವೃತ್ರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ. ಈ ಹಿನ್ನೆಲೆಯಲ್ಲಿ ಬುಧಿ ದೀಪಾವಳಿಯನ್ನು ಈ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ" ಎಂದರು.