ನವದೆಹಲಿ: ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಆರ್ಥಿಕ ಸುಧಾರಣೆ ತರಲು ಮತ್ತು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು 3.03 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಮ್ಸ್) ಮೂಲಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಈ ಅನುದಾನ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶ ಹೊಂದಲಾಗಿದೆ. ಸೌರಶಕ್ತಿ ಮೂಲಕ ಹಗಲು ಹೊತ್ತಿನಲ್ಲಿ ರೈತರಿಗೆ ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ.
ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳಿಗೆ ಯೋಜನೆ ಅಡಿಯಲ್ಲಿನ ಮೊತ್ತವು ದೊರೆಯುವುದಿಲ್ಲ. ಆದರೆ, ನಷ್ಟವನ್ನು ಸರಿಪಡಿಸಲು ಕೈಗೊಳ್ಳಲಾದ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದಾಗ ಮಾತ್ರ ಅನುದಾನ ದೊರಕುತ್ತದೆ. ಇನ್ನು 25 ಕೋಟಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ, 10 ಸಾವಿರ ಫೀಡರ್‌ಗಳ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ತಾಂತ್ರಿಕ ಮತ್ತು ವಾಣಿಜ್ಯದ ಒಟ್ಟು ನಷ್ಟವನ್ನು ಶೇ 12ಕ್ಕೆ ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇನ್ನು ಮೊದಲ ಹಂತದಲ್ಲಿ ಕೃಷಿ ಗ್ರಾಹಕರನ್ನು ಹೊರತುಪಡಿಸಿ ಎಲ್ಲಾ ಗ್ರಾಹಕರಿಗೆ 10 ಕೋಟಿ ಮೀಟರ್‌ಗಳನ್ನು ಡಿಸೆಂಬರ್ 2023 ರೊಳಗೆ ಅಳವಡಿಸಲಾಗುವುದು.