ನವದೆಹಲಿ: ಮಾರ್ಚ್ 12 ರಿಂದ ಮಧ್ಯ ಭಾರತದಾದ್ಯಂತ ಗರಿಷ್ಠ ತಾಪಮಾನವು ಹೆಚ್ಚಳವಾಗಿದೆ. ಬೇಸಿಗೆ ಕಾಲ ಪ್ರಾರಂಭ ಆಗುತ್ತಿದ್ದಂತೆ ಬಿಸಿಲ ಧಗೆ ಏರಿಕೆ ಆಗುತ್ತಲೇ ಇದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆ ಋತು ಇರುತ್ತದೆ. ಆದರೆ, ಆರಂಭದ ಎರಡು ವಾರದಲ್ಲೇ ಜನರಿಗೆ ಸುಡುವ ಬಿಸಿಲು ಕಾಡುತ್ತಿದ್ದು, ತಾಪ ಹೆಚ್ಚಾಗಿರುವುದರಿಂದ ಈ ಬೇಸಿಗೆಯ ಕಾವು ಮತ್ತಷ್ಟು ಏರಲಿದೆ.
ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಸೌರಾಷ್ಟ್ರ-ಕಚ್, ಕೊಂಕಣ ಮತ್ತು ಪಶ್ಚಿಮ ರಾಜಸ್ಥಾನ, ಗುಜರಾತ್, ಪೂರ್ವ ರಾಜಸ್ಥಾನ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಮಾರ್ಚ್ 17 ರವರೆಗೆ ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹೀಟ್ ವೇವ್ ಕಂಡುಬರಲಿದೆ. ಮಾರ್ಚ್ 18 ರಂದು ಸಹ ಗರಿಷ್ಠ ತಾಪಮಾನದ ಕಂಡು ಬರುವ ಸಾಧ್ಯತೆಯಿದೆ. ಮಾರ್ಚ್ 16 ರಂದು ಕೊಂಕಣ ಮತ್ತು ಸೌರಾಷ್ಟ್ರ-ಕಚ್ ಭಾದರಲ್ಲಿ ಬಿಸಿ ಅಲೆಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಊಹಿಸಿದೆ. ಗುಜರಾತ್, ಪಶ್ಚಿಮ ಮಧ್ಯಪ್ರದೇಶದದಲ್ಲಿ ಮುಂದಿನ ಎರಡು ದಿನಗಳವರೆಗೆ ಉಷ್ಣ ಅಲೆಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮಾರ್ಚ್ 16 ಮತ್ತು 17 ರಂದು ಪೂರ್ವ ರಾಜಸ್ಥಾನದ ಮೇಲೆ ಹಾಗೂ ಮಾರ್ಚ್ 16 ರಿಂದ 18 ರ ವರೆಗೆ ಒಡಿಶಾದದಲ್ಲಿ ಪ್ರಖರ ಬಿಸಿಲು ಕಂಡುಬರುವ ಸಾಧ್ಯತೆಯಿದೆ ಎಂದು IMD ಹೇಳಿದೆ.
ಶಾಖದ ಅಲೆಯ ಕಾರಣಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ IMD ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ, ಈ ಮೇಲಿನ ಪ್ರದೇಶಗಳಲ್ಲಿ ಗಾಳಿಯ ಹರಿವಿನ ಮಾದರಿಯಿಂದಾಗಿ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವಿದೆ. ಈ ಪ್ರದೇಶಗಳಲ್ಲಿ ದಕ್ಷಿಣದಿಂದ ಉತ್ತರದ ಕಡೆಗೆ ಕಡಿಮೆ ಮಟ್ಟದ ಗಾಳಿ ಇರುತ್ತದೆ, ಅದು ಬಿಸಿಯನ್ನು ತರುತ್ತದೆ. ಗಾಳಿಯು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದ ಮೇಲೆ ಆಗ್ನೇಯ ದಿಕ್ಕಿನಲ್ಲಿ ಸಾಗಿದಾಗ, ಉತ್ತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದವರೆಗೆ ಹೆಚ್ಚಿನ ತಾಪಮಾನ ಕಂಡುಬರಲಿದೆ ಎಂದರು.