ದೇಶದ್ರೋಹ ಕಾನೂನು ಹಾಗೂ ಅದರ ವ್ಯಾಖ್ಯಾನದ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮದನ ಬಿ. ಲೋಕೂರ ಈಟಿವಿ ಭಾರತ ದೊಂದಿಗೆ ತಮ್ಮ ವಿದ್ವತ್ಪೂರ್ಣ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜಸ್ಟಿಸ್ ಲೋಕೂರ ಅವರ ಮಾತುಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.
ಎರಡು ತೆಲುಗು ಟಿವಿ ಚಾನೆಲ್ಗಳು ತಮ್ಮ ವಿರುದ್ಧ ದಾಖಲಾದ ದೇಶದ್ರೋಹದ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆಯು ಕಳೆದ ಮೇ 31 ರಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಿತು. ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿ ಕೆಲ ವಸ್ತುನಿಷ್ಠ ವರದಿಗಳನ್ನು ಬಿತ್ತರಿಸಿದ್ದಕ್ಕೆ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯದ ಹರಣಕ್ಕೆ ಮುಂದಾಗಿದೆ ಎಂದು ಚಾನೆಲ್ಗಳು ಆರೋಪಿಸಿದ್ದವು. ಆದರೆ, ರಾಜ್ಯ ಸರ್ಕಾರದ ಪ್ರಕಾರ ಇದು ಸ್ಪಷ್ಟವಾಗಿ ದೇಶದ್ರೋಹದ ಪ್ರಕರಣವಾಗಿತ್ತು. ಹೀಗಾಗಿ ದೇಶದ್ರೋಹ ಅಪರಾಧದ ಮಿತಿಗಳನ್ನು ಸ್ಪಷ್ಟವಾಗಿ ಗುರುತಿಸುವುದು ಈಗ ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಈ ವಿಚಾರಣೆಯ ಸಮಯದಲ್ಲಿ ಹೇಳಿದ್ದು ಗಮನಾರ್ಹ
ದೇಶದ್ರೋಹ ಎಂದರೇನು?ಕೇದಾರ ನಾಥ ಸಿಂಗ್ ವಿರುದ್ಧ ಬಿಹಾರ ರಾಜ್ಯ ಸರ್ಕಾರ ಮಧ್ಯದ ಪ್ರಕರಣದಲ್ಲಿ 1962 ರಲ್ಲಿಯೇ ಐವರು ಸದಸ್ಯರ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಕುರಿತು ಆದೇಶ ನೀಡಿತ್ತು. ಈ ಆದೇಶದಲ್ಲಿರುವ ಅಕ್ಷರ ಹಾಗೂ ಆಶಯಗಳಿಗನುಗುಣವಾಗಿ, 1995 ರಲ್ಲಿ ಬಲವಂತ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಲ್ಲದೇ ಈಗ ವಿನೋದ ದುವಾ ವಿರುದ್ಧ ಹಿಮಾಚಲ ಪ್ರದೇಶ ಪ್ರಕರಣದಲ್ಲೂ ಅದರನ್ವಯವೇ ಸುಪ್ರೀಂಕೋರ್ಟ್ ಆದೇಶ ಜಾರಿ ಮಾಡಿದೆ. ಹಾಗಾದರೆ ಮತ್ತೆ ಅದೆಷ್ಟು ಬಾರಿ ಈ ದೇಶದ್ರೋಹ ಕಾನೂನನ್ನು ಅರ್ಥೈಸುವುದು?
ಭಾರತ ಸಂವಿಧಾನದ ಆರ್ಟಿಕಲ್ 141ರ ಪ್ರಕಾರ, ಸುಪ್ರೀಂಕೋರ್ಟ್ ನೀಡುವ ಆದೇಶಗಳನ್ನು ಚಾಚೂ ತಪ್ಪದಂತೆ ಪಾಲಿಸುವುದು ಭಾರತ ನೆಲದ ಇತರ ಎಲ್ಲ ನ್ಯಾಯಾಲಯಗಳ ಬಂಧನಕಾರಕ ಕರ್ತವ್ಯವಾಗಿರುತ್ತದೆ. ಒಂದೊಮ್ಮೆ ಒಂದು ಕಾನೂನನ್ನು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದಾಗ ಆ ವ್ಯಾಖ್ಯಾನವು ಪತ್ರಕರ್ತರು, ಮಾಧ್ಯಮ ಮನೆಗಳು ಮತ್ತು ಟ್ವೀಟ್ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು, ಪೊಲೀಸರು ಹಾಗೂ ಕೋರ್ಟುಗಳಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಪ್ರಕರಣದಲ್ಲಿಯೂ ಅದೇ ಕಾನೂನನ್ನು ಹೊಸದಾಗಿ ವ್ಯಾಖ್ಯಾನಿಸಬೇಕಿಲ್ಲ. ಹೀಗೆ ಮಾಡುತ್ತ ಹೋದಲ್ಲಿ ಅದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗುತ್ತದೆ. ಆದರೆ ಕೆಲ ಅಧಿಕಾರಸ್ಥರು ಕಾನೂನು ಪಾಲನೆಗೆ ವಿಫಲರಾಗುವುದೇ ಮುಖ್ಯ ವಿಷಯವಾಗಿದೆ.
ಏನಿದು ಕೇದಾರನಾಥ್ ಸಿಂಗ್ ಪ್ರಕರಣ
ಕೇದಾರ ನಾಥ ಸಿಂಗ್ ಪ್ರಕರಣ ನೋಡಿದಲ್ಲಿ- “ಒಂದು ಸರ್ಕಾರದ ಬಗ್ಗೆ ಅಥವಾ ಅದರ ಕಾರ್ಯವೈಖರಿಯ ಬಗ್ಗೆ ತನಗೇನನಿಸುತ್ತದೆಯೋ ಅದನ್ನು ಟೀಕೆಯ ಮುಖಾಂತರ ಅಥವಾ ಹೇಳಿಕೆಯ ಮುಖಾಂತರ ಹೇಳುವ ಅಥವಾ ಬರೆಯುವ ಎಲ್ಲ ಹಕ್ಕು ನಾಗರಿಕನೊಬ್ಬನಿಗೆ ಇದೆ. ಆದರೆ, ಇದೇ ಸಮಯದಲ್ಲಿ ಆತ ಕಾನೂನು ಪ್ರಕಾರ ಸ್ಥಾಪಿತವಾದ ಸರ್ಕಾರದ ವಿರುದ್ಧ ಜನತೆ ಹಿಂಸಾತ್ಮಕ ದಂಗೆ ಏಳುವಂತೆ ಮಾಡುವಂತಿಲ್ಲ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಯತ್ನ ಮಾಡುವಂತಿಲ್ಲ.”
ಇದರ ಮತ್ತಷ್ಟು ವಿವರಣೆ ಇಲ್ಲಿದೆ- “ಬರೆದ ಅಥವಾ ಮಾತನಾಡಿದ ಶಬ್ದಗಳು ಇತ್ಯಾದಿಗಳು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡುವ ವಿನಾಶಕಾರಿ ಉದ್ದೇಶವನ್ನು ಹೊಂದಿದ್ದಲ್ಲಿ ಆಗ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಕಾನೂನು ಮಧ್ಯ ಪ್ರವೇಶಿಸಿ ಅಂಥ ಯತ್ನಗಳನ್ನು ತಡೆಯುತ್ತದೆ.” ಅಂದರೆ ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸುವ ಉದ್ದೇಶ ಅಥವಾ ಪ್ರವೃತ್ತಿ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವುದು ಅಥವಾ ಹಿಂಸಾಚಾರಕ್ಕೆ ಪ್ರಚೋದಿಸುವ ಕೃತ್ಯಗಳಿಗೆ ಮಾತ್ರ ದೇಶದ್ರೋಹದ ಕಾನೂನನ್ನು ಸುಪ್ರೀಂಕೋರ್ಟ್ ಮಿತಿಗೊಳಿಸಿದೆ. ಈ ಕಾನೂನು ಸ್ಪಷ್ಟ ಮತ್ತು ನಿಸ್ಸಂದಿಗ್ಧವಾಗಿದೆ.
ಈಗ ಈ ಕಾನೂನನ್ನು ಓರ್ವ ಪತ್ರಕರ್ತ ಅಥವಾ ಟಿವಿ ಚಾನೆಲ್ ಒಂದಕ್ಕೆ ಅನ್ವಯಿಸಿ ನೋಡಿದರೆ ಇದು ಎಷ್ಟು ಕಷ್ಟ ಅಥವಾ ಸುಲಭ ಎಂಬುದು ತಿಳಿಯುತ್ತದೆ. ಭಾರತ ಸರ್ಕಾರದ ನೀತಿ ಅಥವಾ ನಿರ್ಣಯವೊಂದನ್ನು ಟೀಕಿಸಿ ಅಥವಾ ಅದನ್ನು ವಿರೋಧಿಸಿ ವರದಿಯೊಂದನ್ನು ಪ್ರಕಟಿಸಲಾಗಿರುತ್ತದೆ. ಇದು ದೇಶದ್ರೋಹವಲ್ಲ.. ಆದರೆ, ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಆ ಪತ್ರಕರ್ತ ಅಥವಾ ಚಾನೆಲ್ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾನೆ. ಇಂಥ ಸಂದರ್ಭಗಳಲ್ಲಿ ಪೊಲೀಸ್ ತನಿಖಾಧಿಕಾರಿಗೆ ಕಾನೂನು ಏನು ಹೇಳುತ್ತದೆ ಎಂಬುದು ಗೊತ್ತಿರುತ್ತದೆ. ಗೊತ್ತಿಲ್ಲ ಎಂದು ಆತ ಹೇಳುವ ಹಾಗೆ ಇಲ್ಲ. ಈ ಸಮಯದಲ್ಲಿ ಮಾಧ್ಯಮ ವರದಿಯು ಭಿನ್ನಾಭಿಪ್ರಾಯವಾಗಿದೆಯೇ ಹೊರತು ದೇಶದ್ರೋಹವಲ್ಲ ಎಂದು ಆತನಿಗೆ ತಿಳಿಯಬೇಕು. ಆದರೂ ಆತ ಕಾನೂನನ್ನು ತಪ್ಪಾಗಿಯೇ ವ್ಯಾಖ್ಯಾನಿಸಿ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತಾನೆ. ಇಂಥ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಮೇಲೆ ನಿಯಂತ್ರಣವಿಡುವವರು ಯಾರು?