ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಮತ್ತು ಚುನಾವಣೋತ್ತರ ಹಿಂಸಾಚಾರದ ಘಟನೆಗಳು ಮುಂದುವರೆದಿವೆ. ಪಂಚಾಯತ್ ಚುನಾವಣೆಯಲ್ಲಿ ಮತದಾನ 'ಅಸಿಂಧು' ಎಂದು ಘೋಷಿಸಲಾದ ಎಲ್ಲ 697 ಬೂತ್‌ಗಳಲ್ಲಿ ಜುಲೈ 10ರಂದು ಅಂದರೆ ಇಂದು ಮರು ಮತದಾನ ನಡೆಯುತ್ತಿದೆ.
ಮುರ್ಷಿದಾಬಾದ್ ಸೇರಿದಂತೆ ನಾಡಿಯಾ, ಪುರುಲಿಯಾ, ಮಾಲ್ಡಾ, ಬಿರ್ಭುಮ್, ಜಲ್ಪೈಗುರಿ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣಗಳಲ್ಲಿ ಮರು ಮತದಾನ ಪ್ರಗತಿಯಲ್ಲಿದೆ. ಶನಿವಾರ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರದ ನಂತರ ರಾಜ್ಯ ಚುನಾವಣಾ ಆಯೋಗ ಮರು ಮತದಾನ ನಡೆಸಲು ನಿರ್ಧರಿಸಿತು. ಮತದಾನದ ದಿನದಂದು ಈ ಬೂತ್‌ಗಳಲ್ಲಿ ಮತಪೆಟ್ಟಿಗೆಗಳಿಗೆ ಹಾನಿ, ಪ್ರಿಸೈಡಿಂಗ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ನಕಲಿ ಮತದಾನದ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿದ್ದು, ನಂತರ ಎಸ್‌ಇಸಿ ಮತದಾನ ರದ್ದುಗೊಳಿಸಿತ್ತು.
ಮರು ಮತದಾನಕ್ಕೆ ಆದೇಶಿಸಿರುವ ಪ್ರತಿಯೊಂದು ಬೂತ್‌ಗಳಲ್ಲಿ ಕನಿಷ್ಠ 4 ಕೇಂದ್ರ ಪೊಲೀಸ್ ಪಡೆ ಸಿಬ್ಬಂದಿ ನಿಯೋಜಿಸಲಾಗುವುದು. ಮರು ಮತದಾನವನ್ನು ಘೋಷಿಸಿದ ಜಿಲ್ಲೆಗಳಲ್ಲಿ ಮುರ್ಷಿದಾಬಾದ್ ಅತಿ ಹೆಚ್ಚು 174 ಬೂತ್‌ಗಳನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಮಾಲ್ಡಾ 110 ಬೂತ್‌ಗಳನ್ನು ಹೊಂದಿದೆ. ಹಾಗೆಯೇ, ನಾಡಿಯಾದ 89 ಬೂತ್‌ಗಳಲ್ಲಿ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಕ್ರಮವಾಗಿ 46 ಮತ್ತು 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 61,636 ಬೂತ್‌ಗಳಲ್ಲಿ ಜನರು ಶನಿವಾರ ಮತ ಚಲಾಯಿಸಿದ್ದಾರೆ.