ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸಾಕಷ್ಟು ಸದ್ದು ಮಾಡುತ್ತಿರುವ ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಕಷ್ಟ ಶುರುವಾಗಿದೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆಗೆ ಒಳಪಡಿಸಬಹುದು ಎಂಬ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಕೋಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ಮತ್ತೊಂದೆಡೆ, ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಕೇಂದ್ರ ಸಂಸ್ಥೆ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಲು ಕೋಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಅಮೃತಾ ಸಿನ್ಹಾ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾನರ್ಜಿ ಮೇಲ್ಮನವಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ಬ್ಯಾನರ್ಜಿ ಪರ ವಕೀಲರು ನ್ಯಾಯಮೂರ್ತಿ ಸುಬ್ರತಾ ತಾಲೂಕ್‌ದಾರ್ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಆದರೆ, ವಿಭಾಗೀಯ ಪೀಠವು ಅರ್ಜಿಯ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಈಗಾಗಲೇ ನಿಗದಿಯಾದ ಪ್ರಕರಣಗಳ ಕೆಲ ವಿಚಾರಣೆಗಳು ಮತ್ತು ತೀರ್ಪುಗಳು ಬಾಕಿ ಇವೆ. ಅಲ್ಲದೇ, ಸೋಮವಾರದಿಂದ ಬೇಸಿಗೆ ರಜೆ ಇದೆ. ಆದ್ದರಿಂದ ರಜಾಕಾಲದ ಪೀಠವನ್ನು ಸಂಪರ್ಕಿಸುವಂತೆ ನ್ಯಾಯಪೀಠ ಬ್ಯಾನರ್ಜಿ ಪರ ವಕೀಲರಿಗೆ ಮೌಖಿಕವಾಗಿ ಸಲಹೆ ನೀಡಿತ್ತು. ನಂತರ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರ್ನಮಯ್ ಭಟ್ಟಾಚಾರ್ಯ ನೇತೃತ್ವದ ಮುಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಕೂಡ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿ ರಜಾಕಾಲದ ಪೀಠವನ್ನು ಸಂಪರ್ಕಿಸುವ ಸಲಹೆಯನ್ನು ನೀಡಿದೆ. ಈ ಮೂಲಕ ತಕ್ಷಣಕ್ಕೆ ಅಭಿಷೇಕ್ ಬ್ಯಾನರ್ಜಿ ಹೈಕೋರ್ಟ್ನಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ.
ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ್ದ ಅಮೃತಾ ನ್ಯಾಯಮೂರ್ತಿ ಸಿನ್ಹಾ ನೇತೃತ್ವದ ಪೀಠವು ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿ ಆದೇಶಿತ್ತು. ಇದೇ ವೇಳೆ ಅಭಿಷೇಕ್ ಬ್ಯಾನರ್ಜಿ ಮತ್ತು ಉಚ್ಚಾಟಿತ ಟಿಎಂಸಿ ಯುವ ನಾಯಕ ಕುಂತಲ್ ಘೋಷ್ ಅವರಿಗೆ ತಲಾ 25 ಲಕ್ಷ ರೂಪಾಯಿ ದಂಡವನ್ನೂ ನ್ಯಾಯಪೀಠ ವಿಧಿಸಿತು.