ನವದೆಹಲಿ:ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ 20 ಜನರು ಸಾವಿಗೀಡಾಗಿದ್ದು, ರಾಜ್ಯಪಾಲ ಸಿ ವಿ ಆನಂದ್ ಬೋಸ್ ಅವರು ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಈ ಕುರಿತು ಮಾಹಿತಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿ ಕೂಡ ಮಾಡಿದ್ದಾರೆ. ಚುನಾವಣೆಯ ವೇಳೆ ಹಲವು ಸ್ಥಳಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿದ್ದು, ಅದನ್ನು ಗೃಹ ಸಚಿವರಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನಡೆದ ಪಂಚಾಯತ್ ಚುನಾವಣೆಯ ಮತದಾನದ ದಿನದಂದು (ಜುಲೈ 8) ರಾಜ್ಯದ ಹಲವೆಡೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿತ್ತು. ಇದರಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ. ಇದು ರಾಜ್ಯದಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ನಡೆದ ಹೊಡೆದಾಟದಲ್ಲಿ 14 ಮಂದಿ ಮೃತಪಟ್ಟಿದ್ದರು.
ಮತದಾನದ ದಿನದಂದು ನಡೆದ ಮಾರಾಮಾರಿಯ ಬಗ್ಗೆ ಮಾಹಿತಿ ತಿಳಿದ ರಾಜ್ಯಪಾಲ ಆನಂದ್ ಬೋಸ್ ಅವರು ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸ್ವತಃ ಅವರೇ ಉತ್ತರ, ದಕ್ಷಿಣದ 24 ಪರಗಣ ಜಿಲ್ಲೆಗಳ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ರಾಜಕೀಯ ಬಣಗಳ ನಡುವೆ ಮಾರಣಾಂತಿಕ ಘರ್ಷಣೆ ನಡೆದ ಸ್ಥಳಗಳಿಗೂ ತೆರಳಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ್ದರು.
ಈ ಸಂಘರ್ಷದ ಬಗ್ಗೆ ತೀವ್ರ ಕಿಡಿಕಾರಿದ್ದ ರಾಜ್ಯಪಾಲರು, ಶಾಂತಿಯುತ ಮತದಾನಕ್ಕೆ ಮನವಿ ಮಾಡಿದ್ದರು. ಅಲ್ಲದೇ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಹೊಡೆದಾಟ ತಾರಕಕ್ಕೇರಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು.