ಗುವಾಹಟಿ (ಅಸ್ಸೋಂ): ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪಂಚಾಯ್ತಿ ಚುನಾವಣೆ ನಂತರ, ರಾಜ್ಯವು ಬೆದರಿಕೆ ಮತ್ತು ಅಶಾಂತಿ ಎದುರಿಸುತ್ತಲೇ ಇದೆ. ಇದು ವ್ಯಾಪಕ ಹಿಂಸಾಚಾರ ಮತ್ತು ಬೆದರಿಕೆಗೆ ಕಾರಣವಾಗಿದೆ. ಅಸ್ಥಿರ ಪರಿಸ್ಥಿತಿಯು ನೆರೆಯ ರಾಜ್ಯ ಅಸ್ಸಾಂನ ಮೇಲೂ ಪರಿಣಾಮ ಬೀರಿದೆ. ಬಿಜೆಪಿ ಪಕ್ಷದ ವಿಜೇತ ಸದಸ್ಯರು ಸೇರಿದಂತೆ ಹಲವು ಕಾರ್ಯಕರ್ತರು ಅಸ್ಸೋಂ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಹಬೀಬ್‌ಪುರ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಂದ ಬಂದಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 65 ವ್ಯಕ್ತಿಗಳ ಗುಂಪು, ಗುವಾಹಟಿಯ ಧೀರೆನ್‌ಪಾರಾ ಪ್ರದೇಶದಲ್ಲಿ ಆಶ್ರಯ ಪಡೆದಿದೆ. ಅವರಲ್ಲಿ 27 ಮಂದಿ ಪ್ರತಿನಿಧಿಗಳು ಪಂಚಾಯ್ತಿ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದಾರೆ. ಬೆದರಿಕೆಗೆ ಹೆದರಿರುವ ಈ ಪ್ರತಿನಿಧಿಗಳು ತಮ್ಮ ಕುಟುಂಬಗಳೊಂದಿಗೆ ಗುವಾಹಟಿಗೆ ಓಡಿ ಬಂದಿದ್ದಾರೆ. ಕೆಲವರು ತಮ್ಮ ಮಡಿಲಲ್ಲಿ ಮಕ್ಕಳನ್ನು ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ.
ತೃಣಮೂಲ ಕಾಂಗ್ರೆಸ್ನಿಂದ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ:ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ಕಾರ್ಯಕರ್ತರು, ''ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಆಡಳಿತದಿಂದ ಕಾರ್ಯಕರ್ತರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಕೊಲೆ ಮತ್ತು ಅಪಹರಣ ಮಾಡುವ ಬೆದರಿಕೆ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತರನ್ನು ತೃಣಮೂಲ ಕಾಂಗ್ರೆಸ್‌ಗೆ ಸೇರುವಂತೆ ಆಮಿಷವೊಡ್ಡುವ ಪ್ರಯತ್ನಗಳು ನಡೆದಿವೆ. ಧೈರ್ಯದಿಂದ ನಿರಾಕರಿಸಿದರೂ ಜೀವಕ್ಕೆ ಮತ್ತಷ್ಟು ಬೆದರಿಕೆಯನ್ನು ಉಂಟು ಮಾಡುವ ಘಟನೆಗಳು ಜರುಗಿವೆ ಎಂದು ಅವರು ಆರೋಪಿಸಿದರು.