ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಅದಕ್ಕೆ ಬೇಕಾಗಿರುವ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ದಾಖಲೆಯ 7 ಸಾವಿರಕ್ಕೂ ಅಧಿಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಶಿಕ್ಷಣ ಇಲಾಖೆ ಅಂಕಿ-ಅಂಶ ಬಹಿರಂಗಪಡಿಸಿದೆ.
ಕಳೆದ 10 ವರ್ಷಗಳಲ್ಲಿ 7,018 ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಅಂಕಿ-ಅಂಶಗಳ ಪ್ರಕಾರ, ಮಾರ್ಚ್ 31, 2012ರಲ್ಲಿ ಪಶ್ಚಿಮ ಬಂಗಾಳದಲ್ಲಿ 74,717 ಸರ್ಕಾರಿ ಶಾಲೆಗಳಿದ್ದವು. ಆದರೆ, ಮಾರ್ಚ್ 31, 2022ರ ಹೊತ್ತಿಗೆ ಅವುಗಳ ಸಂಖ್ಯೆ 67,699ಕ್ಕೆ ಇಳಿಕೆಯಾಗಿದೆ. ಮುಖ್ಯವಾಗಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಹೆಚ್ಚಿನ ಶಾಲೆಗಳು ಬಂದ್ ಆಗಿವೆ. ಇಲ್ಲಿ ಒಟ್ಟು 1,192 ಶಾಲೆಗಳನ್ನ ಮುಚ್ಚಲಾಗಿದೆ. ಉಳಿದಂತೆ ಪಶ್ಚಿಮ ಮಿಡ್ನಾಪುರದಲ್ಲಿ ಶಾಲೆಗಳ ಸಂಖ್ಯೆ 8,404ರಿಂದ 7,357ಕ್ಕೆ ಇಳಿದಿದೆ.