ಡೈಮಂಡ್ ಹಾರ್ಬರ್ (ಪಶ್ಚಿಮ ಬಂಗಾಳ):ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳ ಮೇಲೆ ಹೆತ್ತ ತಂದೆ ಹಾಗೂ ಆತನ ತಮ್ಮ ಇಬ್ಬರೂ ಸೇರಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಲಕಿಯ ತಾಯಿಯ ದೂರಿನ ಮೇರೆಗೆ, ಕೋಲ್ಕತಾದಿಂದ 60 ಕಿಲೋಮೀಟರ್ ದೂರದಲ್ಲಿರುವ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ನಲ್ಲಿನ ಬಾಲಕಿಯ ಮನೆಯಿಂದ ತಂದೆ ಹಾಗೂ ಚಿಕ್ಕಪ್ಪನನ್ನು ಬಂಧಿಸಿದ ನಂತರ ಪ್ರಕರಣದ ಬಗ್ಗೆ ತಿಳಿದು ಬಂದಿದೆ.
ಮಗು ಒಂದೂವರೆ ವರ್ಷದ್ದಾಗಿನಿಂದ ಅವರು ಈ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ. ನಾನು ಅದನ್ನು ಪ್ರತಿಭಟಿಸಿದಾಗಲೆಲ್ಲ ಅವರು ನನ್ನ ಮೇಲೆ ಹಲ್ಲೆ ಮಾಡಿ ನನ್ನೆದುರಿಗೆಯೇ ಮತ್ತೆ ಅಂಥ ಕೃತ್ಯ ಎಸಗುತ್ತಿದ್ದರು. ನನ್ನ ಅತ್ತೆ ಸಹ ನನ್ನ ಗಂಡ ಹಾಗೂ ಮೈದುನನ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ. ಅಸಹಾಯಕಳಾಗಿದ್ದ ನಾನು, ಕೊನೆಗೂ ಧೈರ್ಯ ಮಾಡಿ ದೂರು ನೀಡಿದ್ದೇನೆ. ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಮಾಧ್ಯಮಗಳ ಮುಂದೆ ಹೇಳಿದರು.
ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯು ತನ್ನ ತಂದೆ ಹಾಗೂ ಚಿಕ್ಕಪ್ಪನಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಮಗುವಿಗೆ ಅವರು ಬಲವಂತವಾಗಿ ವಯಸ್ಕರ ಚಿತ್ರಗಳನ್ನು ತೋರಿಸಿದ್ದಾರೆ. ತಾಯಿಯ ದೂರಿನ ಆಧಾರದಲ್ಲಿ ನಾವು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಡೈಮಂಡ್ ಹಾರ್ಬರ್ ಪೊಲೀಸ್ ಠಾಣೆಯ ಹಿರಿಯ ತನಿಖಾಧಿಕಾರಿ ತಿಳಿಸಿದರು.
ಕೆಲ ವಾರಗಳ ಹಿಂದೆ ಡೈಮಂಡ್ ಹಾರ್ಬರ್ ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ ಅವರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ನಾನು ಅಸಹಾಯಕಳಾಗಿದ್ದೆ ಮತ್ತು ಮುಂದೇನು ಮಾಡುವುದೆಂದು ತೋಚಲಿಲ್ಲ. ಒಂದು ವೇಳೆ ಅವರಿಗೆ ಈ ವಿಷಯ ತಿಳಿದರೆ ನನ್ನನ್ನು ಹಾಗೂ ಮಗಳನ್ನು ಕೊಂದು ಬಿಡುತ್ತಾರೆ ಎಂಬ ಭಯ ಇತ್ತು. ನಂತರ ನಾನು ಸ್ವಯಂ ಸೇವಾ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಸಹಾಯದಿಂದ ಈಗ ದೂರು ದಾಖಲಿಸಿದ್ದೇನೆ. ಈಗ ಅವರನ್ನು ಬಂಧಿಸಲಾಗಿದೆ ಎಂದು ಬಾಲಕಿಯ ತಾಯಿ ಹೇಳಿದರು.
ಇದನ್ನು ಓದಿ:8 ಮಕ್ಕಳನ್ನ ಕಳೆದುಕೊಂಡ ತಾಯಿ, ಗಂಡನ ಕುಡಿತದ ಚಟ ಬಿಡಿಸಲು ಕನ್ವರ್ ಯಾತ್ರೆ.. 362 ಕಿ.ಮೀ ನಡೆದು ಹೋಗುತ್ತಿರುವ ವೃದ್ಧೆ!