ಕೋಲ್ಕತ್ತಾ (ಪಶ್ಚಿಮ ಬಂಗಾಳ): ಹಾವು ಕಚ್ಚಿದರೆ ಏನು ಮಾಡಬೇಕೆಂದು ತಕ್ಷಣಕ್ಕೆ ಹಲವರಿಗೆ ತಿಳಿಯುವುದಿಲ್ಲ. ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಹಾವು ಕಚ್ಚಿ 360 ಜನರು ಸಾವನ್ನಪ್ಪಿದ್ದರು ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳಿಂದ ತಿಳಿಯುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಇದೀಗ ಸರ್ಕಾರ ವಿನೂತನ ತಂತ್ರ ಅನುಸರಿಸಿದೆ. ಹಾವು ಕಡಿತಕ್ಕೆ ಬಲಿಯಾದ ಜನರಿಗೆ ಸುಲಭವಾಗಿ ನೆರವಿಗೆ ಧಾವಿಸುವ ಸಲುವಾಗಿ ಮೊಬೈಲ್ ಫೋನ್ ಅಪ್ಲಿಕೇಶನ್ ಪರಿಚಯಿಸಿದೆ. ಈ ಆ್ಯಪ್ನ ಮೂಲಕ ಸಂತ್ರಸ್ತರು ತಮ್ಮ ಜೀವ ಉಳಿಸಲು ಪೂರಕವಾದ ನೆರವು ಪಡೆದುಕೊಳ್ಳಬಹುದಾಗಿದೆ.
ಹಾವು ಕಡಿತದ ಬಗ್ಗೆ ಜನರು ಇಂದಿಗೂ ಅನೇಕ ರೀತಿಯ ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಇದರಿಂದ ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿದೆ. ಜೀವಕ್ಕೂ ಹಾನಿ ಉಂಟಾಗುತ್ತದೆ. ಸರ್ಕಾರದ ಹೊಸ ಆಲೋಚನೆಯಿಂದ ಯಾವುದೇ ಸಮಯ ವ್ಯರ್ಥವಾಗದು. ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಲು ಈ ಅಪ್ಲಿಕೇಶನ್ ಎಲ್ಲಾ ರೀತಿ ಅಗತ್ಯ ಮಾಹಿತಿ ನೀಡುತ್ತದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯ:ನಿಮ್ಮ ಫೋನ್‌ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ನಿಂದ Snakebite Prevention and Rescue ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಹಾವು ಕಡಿತಕ್ಕೆ ಒಳಗಾದ ನಂತರ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಆ್ಯಪ್ ತಿಳಿಸುತ್ತದೆ. ಪ್ರಥಮ ಚಿಕಿತ್ಸೆ ಎಂದರೇನು? ಹತ್ತಿರದ ಆಸ್ಪತ್ರೆಗೆ ಹೋದರೆ ಆ್ಯಂಟಿವೆನಮ್ ಇಂಜೆಕ್ಷನ್ ಪಡೆಯುವ ಕುರಿತು ಮಾಹಿತಿ ಒದಗಿಸುತ್ತದೆ.
ವೈದ್ಯರ ಪ್ರಕಾರ, ಹಾವು ಕಚ್ಚಿದ ನಂತರ ತಪ್ಪು ಚಿಕಿತ್ಸಾ ವಿಧಾನಗಳಿಂದ ಅನೇಕರು ಸಾವನ್ನಪ್ಪುತ್ತಾರೆ. ಗ್ರಾಮೀಣ ಭಾಗ ಜನರು ಮೂಢನಂಬಿಕೆಗಳನ್ನು ಹೊಂದಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಸರಿಯಾದ ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕೆಂದು ಅನೇಕರಿಗೆ ತಿಳಿದಿಲ್ಲ. ಹಾಗಾಗಿ ಆ್ಯಪ್ ರಾಜ್ಯದ ಜನರಿಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.