ಕೋಲ್ಕತ್ತಾ: ಇಸ್ರೇಲ್ನ ಎನ್‌ಎಸ್‌ಒ ಸಂಸ್ಥೆ ಒದಗಿಸಿದ ಪೆಗಾಸಸ್ ಸ್ಪೈವೇರ್ ಬಳಸಿ 'ಫೋನ್ ಕದ್ದಾಲಿಕೆ' ಪ್ರಕರಣದ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ಎರಡು ಸದಸ್ಯರ ವಿಚಾರಣಾ ಆಯೋಗವನ್ನು ರಚಿಸಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎರಡು ಸದಸ್ಯರ ವಿಚಾರಣಾ ಆಯೋಗವು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಮದನ್ ಭೀಮರಾವ್ ಲೋಕೂರ್ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನು ಒಳಗೊಂಡಿದೆ.
ಸಚಿವ ಸಂಪುಟದ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ವಿಚಾರಣಾ ಆಯೋಗ ರಚಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ. ಗೌರವಾನ್ವಿತ ನ್ಯಾಯಾಧೀಶರಿಬ್ಬರಿಗೆ ವಿಚಾರಣಾ ಆಯೋಗದ ಉಸ್ತುವಾರಿ ವಹಿಸಿಕೊಳ್ಳಲು ಕೋರಲಾಗಿದೆ. ಆಯೋಗವು ಆದಷ್ಟು ಬೇಗ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಕಳೆದ ಕೆಲವು ದಿನಗಳಿಂದ ಸಂಸತ್ ಅಧಿವೇಶನ ನಡೆಯುತ್ತಿದೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ತನಿಖಾ ಆಯೋಗವನ್ನು ರಚಿಸುತ್ತದೆ ಎಂದು ನಿರೀಕ್ಷಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ, ನಾವು ಮೊದಲ ರಾಜ್ಯ ಸರ್ಕಾರವಾಗಿ ವಿಚಾರಣಾ ಆಯೋಗವನ್ನು ರಚಿಸಲು ನಿರ್ಧರಿಸಿದ್ದೇವೆ. ಪೆಗಾಸಸ್ ಸ್ಪೈವೇರ್ ಬಳಸಿ 'ಫೋನ್ ಕದ್ದಾಲಿಕೆ' ಹೇಗೆ ನಡೆಯುತ್ತದೆ ಎಂಬುದರ ವಿವರಗಳನ್ನು ಆಯೋಗ ಪರಿಶೀಲಿಸುತ್ತದೆ ಎಂದು ಹೇಳಿದರು.