ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ನಾಯಕರಾದ ಜೆಪಿ ನಡ್ಡಾ, ರಾಜನಾಥ್ ಸಿಂಗ್ ಹಾಗೂ ಯೋಗಿ ಆದಿತ್ಯನಾಥ್ ಇಂದು ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಬಂಕುರಾ ಜಿಲ್ಲೆಯ ಬಿಷ್ಣುಪುರದಲ್ಲಿ ರೋಡ್ ಶೋ ನಡೆಸಲಿದ್ದು, ಮಧ್ಯಾಹ್ನ ಕೋತುಲ್ಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುರುಲಿಯಾ, ಬಂಕುರಾ ಮತ್ತು ಮದಿನಿಪುರದಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇಂದು ಬಂಗಾಳಕ್ಕೆ ಭೇಟಿ ನೀಡಲಿದ್ದು, ದಾಸ್ಪುರ್, ಸಬಾಂಗ್ ಮತ್ತು ಸಲ್ಬೋನಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ದೀದಿಗೆ ಶಾಕ್ ಮೇಲೆ ಶಾಕ್: ಟಿಎಂಸಿ ಪಕ್ಷಕ್ಕೆ ಮತ್ತೋರ್ವ ನಾಯಕಿ ರಾಜೀನಾಮೆ
ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಮಾರ್ಚ್ 27 ಮತ್ತು ಏಪ್ರಿಲ್ 29 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಳೆದೆರಡು ದಿನಗಳಿಂದ ವ್ಹೀಲ್ಚೇರ್ ಮೂಲಕವೇ ರೋಡ್ ಶೋ ನಡೆಸುತ್ತಿದ್ದಾರೆ.