ಕರ್ನಾಟಕ

karnataka

'ನೀವು ವಿಪಕ್ಷಗಳ ಮೈತ್ರಿ ಒಕ್ಕೂಟ ಮುನ್ನಡೆಸುವಿರಾ': ಮಮತಾ ಬ್ಯಾನರ್ಜಿಗೆ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಶ್ನೆ

By PTI

Published : Sep 14, 2023, 8:33 AM IST

ದುಬೈ ಮತ್ತು ಸ್ಪೇನ್​ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುಬೈ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಿ, ಕೆಲಕಾಲ ಮಾತುಕತೆ ನಡೆಸಿದರು.

ಮಮತಾ ಬ್ಯಾನರ್ಜಿ ಹಾಗು ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ
ಮಮತಾ ಬ್ಯಾನರ್ಜಿ ಹಾಗು ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಬುಧವಾರ ದುಬೈ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಾನಿಲ್ ವಿಕ್ರಮಸಿಂಘೆ ಅವರು ಮಮತಾ ಬ್ಯಾನರ್ಜಿಗೆ ಕುತೂಹಲಕರ ಪ್ರಶ್ನೆ ಕೇಳಿದರು. "ನೀವು ವಿರೋಧ ಪಕ್ಷದ ಮೈತ್ರಿ ಒಕ್ಕೂಟವಾದ ಇಂಡಿಯಾವನ್ನು ಮುನ್ನಡೆಸುವಿರಾ? ಎಂದಿದ್ದಾರೆ. ಇದಕ್ಕೆ ಮಮತಾ ನಗುತ್ತಾ ಪ್ರತಿಕ್ರಿಯಿಸಿ, "ಜನರು ನಮ್ಮನ್ನು ಬೆಂಬಲಿಸಿದರೆ ನಾವು ಆ ಸ್ಥಾನದಲ್ಲಿರಬಹುದು" ಎಂದರು.

ಮಮತಾ ಬ್ಯಾನರ್ಜಿ 12 ದಿನಗಳ ದುಬೈ ಮತ್ತು ಸ್ಪೇನ್‌ ದೇಶಗಳ ಅಧಿಕೃತ ಪ್ರವಾಸದಲ್ಲಿದ್ದಾರೆ. ದುಬೈ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಬ್ಯಾನರ್ಜಿ ಅವರನ್ನು ರಾನಿಲ್ ವಿಕ್ರಮಸಿಂಘೆ ಗಮನಿಸಿದ್ದು, ಬನ್ನಿ ಮಾತಾಡೋಣ ಎಂದು ಕರೆದಿದ್ದರು. ಈ ಕುರಿತು ಸಿಎಂ ಬ್ಯಾನರ್ಜಿ, ಸಾಮಾಜಿಕ ಮಾಧ್ಯಮ 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. "ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ನನ್ನನ್ನು ನೋಡಿ ಬನ್ನಿ ಮಾತನಾಡೋಣ ಎಂದು ಕರೆದರು. ಅವರ ಆಹ್ವಾನಕ್ಕೆ ನಾನು ಆಭಾರಿ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬ್ಯಾನರ್ಜಿ, ನವೆಂಬರ್​ನಲ್ಲಿ ಕೋಲ್ಕತ್ತಾದಲ್ಲಿ ನಡೆಯಲಿರುವ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ-2023ಗೆ ಲಂಕಾ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕ್ರಮಸಿಂಘೆ ಅವರು ಕೂಡಾ ಶ್ರೀಲಂಕಾಕ್ಕೆ ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಿದ್ದಾರೆ. ನಮ್ಮ ನಡುವಿನ ಸಂವಾದ ಆಹ್ಲಾದಕರವಾಗಿತ್ತು ಎಂದು ಬ್ಯಾನರ್ಜಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಜೆ ಮಮತಾ ಬ್ಯಾನರ್ಜಿ ದುಬೈ ತಲುಪಿದ್ದು, ಬುಧವಾರ ಬೆಳಗ್ಗೆ ಸ್ಪೇನ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವರ್ಷದ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ ನವೆಂಬರ್ 21-22 ರಂದು ನಿಗದಿಯಾಗಿದೆ. ದುಬೈ ಮತ್ತು ಸ್ಪೇನ್ ಪ್ರವಾಸಕ್ಕೆ ತೆರಳಿರುವ ಸಿಎಂ ರಾಜ್ಯಕ್ಕೆ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ವ್ಯಾಪಾರ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. (ಪಿಟಿಐ)

5 ವರ್ಷದ ಬಳಿಕ ಮಮತಾ ವಿದೇಶ ಪ್ರಯಾಣ:ದುಬೈಗೆ ತೆರಳುವ ಮುನ್ನ ಮಮತಾ ಬ್ಯಾನರ್ಜಿ ಮಾಧ್ಯಮಕ್ಕೆ ತಮ್ಮ ವಿದೇಶ ಪ್ರವಾಸದ ಕುರಿತು ಮಾಹಿತಿ ನೀಡಿದ್ದರು. "ನಾನು ವಿದೇಶ ಪ್ರಯಾಣ ಬೆಳೆಸಿ ಐದು ವರ್ಷಗಳಾಗಿದೆ. ಈ ವರ್ಷ ಕೋಲ್ಕತ್ತಾ ಇಂಟರ್​ನ್ಯಾಷನ್ ಬುಕ್​ ಫೇರ್‌ಗೆ ಮಾದರಿ ದೇಶ ಸ್ಪೇನ್​ ಆಗಿದೆ. ಸ್ಪೇನ್ ಈ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಿದೆ. ಅಲ್ಲಿ ವಾಣಿಜ್ಯ ಸಭೆಯಲ್ಲಿ ನಾನು ಭಾಗಿಯಾಗಲಿದ್ದೇನೆ. ವಿದೇಶಿ ಪ್ರತಿನಿಧಿಗಳು ಆಗಾಗ್ಗೆ ಬಂಗಾಲಕ್ಕೆ ಭೇಟಿ ನೀಡುತ್ತಿರುತ್ತಾರೆ. ಆದರೆ, ನಾನು ಅಲ್ಲಿಗೆ ಹೋಗಲು ಆಗಿರಲಿಲ್ಲ. ದುಬೈನಲ್ಲಿ ಬ್ಯುಸಿನೆಸ್​ ಕಾನ್ಫರೆನ್ಸ್​ನಲ್ಲಿಯೂ ಭಾಗಿಯಾಗುತ್ತಿದ್ದೇನೆ" ಎಂದು ಸಿಎಂ ಬ್ಯಾನರ್ಜಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಸಿಎಂ ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; 3 ಗಂಟೆ ವಿಳಂಬವಾದ ಪ್ರಯಾಣ

ABOUT THE AUTHOR

...view details