ಕೋಲ್ಕತ್ತಾ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಡವಲು ಕಾಂಗ್ರೆಸ್, ಟಿಎಂಸಿ, ಸಿಪಿಎಂ ಸೇರಿದಂತೆ 17 ಕ್ಕೂ ಹೆಚ್ಚು ಪಕ್ಷಗಳು ಬಿಹಾರದ ಪಾಟ್ನಾದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಮೂರೇ ದಿನಗಳಲ್ಲಿ ಅಪಸ್ವರ ಎದ್ದಿದೆ. ಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ವಿರೋಧಿ ಪಕ್ಷವಾದ ಬಿಜೆಪಿ ಜೊತೆಗೆ ಕೈಜೋಡಿಸಿದೆ. ಅದನ್ನು ನಾನು ಮುರಿಯುತ್ತೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
"ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ಕಟ್ಟುವ ಪ್ರಯತ್ನಗಳು ಸಾಗಿವೆ. ಇತ್ತ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಬಿಜೆಪಿಯ ಜೊತೆ ಸಂಘ ಬೆಳೆಸಿವೆ. ರಹಸ್ಯ ಒಪ್ಪಂದ ಮಾಡಿಕೊಂಡಿರುವುದು ಅಪವಿತ್ರವಾಗಿದೆ. ಈ ಮೈತ್ರಿಯನ್ನು ನಾನು ವಿರೋಧಿಸುವೆ" ಎಂದು ಮಮತಾ ಅವರು ಹೇಳಿದ್ದಾರೆ.
ಆರೋಪ ನಿರಾಕರಿಸಿದ ಕಾಂಗ್ರೆಸ್:ಸಿಎಂ ಮಮತಾ ಬ್ಯಾನರ್ಜಿ ಅವರ ಈ ಆರೋಪವನ್ನು ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ನಿರಾಕರಿಸಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮಮತಾ ಅವರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಬಿಜೆಪಿ ವಿರುದ್ಧ ಮಮತಾ ಹೋರಾಟ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತು ಎಂದಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡುವ ಮಾರ್ಗಗಳ ಕುರಿತು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ಗೆ ಉಪನ್ಯಾಸ ನೀಡಿದ ಕೊನೆಯ ವ್ಯಕ್ತಿ ಮಮತಾ ಎಂದು ಸಿಪಿಎಂ ವ್ಯಂಗ್ಯವಾಡಿದೆ. ಇದಲ್ಲದೇ, ಬಿಜೆಪಿ ನಾಯಕ ರಾಹುಲ್ ಸಿನ್ಹಾ ಕೂಡ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರಗಳ ವಿರುದ್ಧ ಬಿಜೆಪಿ ಪಕ್ಷ ಮಾತ್ರ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.