ನವದೆಹಲಿ:ದೆಹಲಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ವೇಳೆ ಕೆಲಹೊತ್ತು ಅವರೊಂದಿಗೆ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ ದೀದಿ ಅನೇಕ ವಿಷಯಗಳ ಕುರಿತು ಪ್ರಸ್ತಾಪ ಮಾಡಿದರು. ಪ್ರಮುಖವಾಗಿ ತ್ರಿಪುರಾದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಿಜೆಪಿ ಸದಸ್ಯರ ಹಲ್ಲೆ, ಬಿಎಸ್ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ ಹಿಂಪಡೆದುಕೊಳ್ಳುವುದರ ಜೊತೆಗೆ ಕೋವಿಡ್ ಪರಿಸ್ಥಿತಿ ವಿಚಾರವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಪ್ರಧಾನಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಇಂದು ನಾನು ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಿ ರಾಜ್ಯದ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿರುವೆ. ಪ್ರಮುಖವಾಗಿ ಬಿಎಸ್ಎಫ್ ಕಾರ್ಯಾಚರಣೆ ವಿಸ್ತರಣೆ ಹಿಂಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವುದಾಗಿ ತಿಳಿಸಿರುವ ಅವರು, ನಿರ್ಧಾರ ಹಿಂಪಡೆದುಕೊಳ್ಳುವಂತೆ ಹೇಳಿದ್ದೇನೆ ಎಂದರು.
ರಾಜ್ಯಗಳ ಗಡಿ ವಿಚಾರದಲ್ಲಿ ಬಿಎಸ್ಎಫ್ ಅಧಿಕಾರ ವಿಸ್ತರಣೆ ಸರಿಯಲ್ಲ. ಈ ಕಾಯ್ದೆ ಕೂಡಲೇ ಹಿಂಪಡೆದುಕೊಳ್ಳಬೇಕು ಎಂದಿರುವ ಅವರು, ಕೇಂದ್ರದ ಈ ನಿರ್ಧಾರದಿಂದ ರಾಜ್ಯದ 10 ಜಿಲ್ಲೆಗಳ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಗಡಿ ವಿಚಾರದಲ್ಲಿ ನಾವು ಪರಸ್ಪರ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಇಂದು ಕೇಂದ್ರ-ರಾಜ್ಯ ಸಂಬಂಧಕ್ಕೆ ಅಡ್ಡಿಯಾಗಬಾರದು ಎಂದಿದ್ದಾರೆ.
ಇದನ್ನೂ ಓದಿ:ಮಗನ ಮೇಲೆ ತಂದೆಯ ರಾಕ್ಷಸಿ ಕೃತ್ಯ: ತಾಯಿ ಮೊಬೈಲ್ನಲ್ಲಿ ದೌರ್ಜನ್ಯದ ದೃಶ್ಯ ಸೆರೆ