ಕೋಲ್ಕತ್ತಾ (ಪಶ್ಚಿಮ ಬಂಗಾಳ):ಇಂದು ಪಶ್ಚಿಮ ಬಂಗಾಳದ ಭವಾನಿಪುರ, ಜಂಗೀಪುರ್, ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಶಾಸಕ ಸ್ಥಾನ ಪಡೆಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಭವಾನಿಪುರ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿದೆ.
ಭವಾನಿಪುರ ಉಪಚುನಾವಣೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ಕದನವಾಗಿ ಪರಿಣಮಿಸಿದೆ. ಏಕೆಂದರೆ ಈ ಕ್ಷೇತ್ರದಲ್ಲಿ ಅವರು ಗೆದ್ದಿಲ್ಲ ಅಂದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು. ಆದರೆ, ಅವರ ಪಕ್ಷಕ್ಕೆ ಬಹುಮತ ಬಂದ ಹಿನ್ನೆಲೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದರು.
ಸೋತರೆ ರಾಜೀನಾಮೆ..
ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲ. ಭಾರತ ಸಂವಿಧಾನದ 164ನೇ ವಿಧಿಯಡಿ, ರಾಜ್ಯದ ಶಾಸಕಾಂಗದ ಸದಸ್ಯರಲ್ಲದ ಸಚಿವರು 6 ತಿಂಗಳ ಅವಧಿಯೊಳಗೆ ತಮ್ಮ ಸದಸ್ಯತ್ವವನ್ನು ಸಾಬೀತು ಮಾಡಬಹುದಾಗಿದೆ. ಇದೇ ನಿಯಮ ಸಿಎಂ ಅಭ್ಯರ್ಥಿಗೂ ಅನ್ವಯವಾಗಲಿದೆ. ಹೀಗಾಗಿ ಆರು ತಿಂಗಳೊಳಗೆ ಯಾವುದಾದರೂ ಸ್ಥಾನವನ್ನು ಖಾಲಿಗೊಳಿಸಿ ಅಥವಾ ಖಾಲಿಯಾಗಿರುವ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಾಂಗದ ಸದಸ್ಯತ್ವ ಪಡೆಯಬಹುದಾಗಿದೆ. ಹೀಗಾಗಿ ಈ ಉಪಚುನಾವಣೆಯಲ್ಲಿ ಸೋತರೆ ದೀದಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.