ಜಲ್ಪೈಗುರಿ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹುತಾತ್ಮ ಸಿಆರ್ಪಿಎಫ್ ಯೋಧ ಜಗನ್ನಾಥ್ ರಾಯ್ ಅವರ ಪತ್ನಿ ತಾಪಸಿ ರಾಯ್ ಅವರಿಗೆ ಕೇಸರಿ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.
ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಸೆಪ್ಟೆಂಬರ್ 5ರಂದು ನಿಗದಿಯಾಗಿದೆ. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಬಿಷ್ಣುಪದ ರಾಯ್ ಉಸಿರಾಟದ ಸಮಸ್ಯೆಯಿಂದ ಜುಲೈ 25ರಂದು ನಿಧನರಾಗಿದ್ದರು. ಇದರಿಂದಾಗಿ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿದೆ.
2021ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿಷ್ಣುಪದ ರಾಯ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಿತಾಲಿ ರಾಯ್ ವಿರುದ್ಧ ಗೆಲುವು ಸಾಧಿಸಿದ್ದರು. ರಾಯ್ 1,04,688 ಮತಗಳನ್ನು ಪಡೆದರೆ, ಮಿತಾಲಿ ರಾಯ್ 1,00,333 ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಷ್ಣುಪದ ರಾಯ್ 4,355 ಮತಗಳಿಂದ ಜಯ ದಾಖಲಿಸಿದ್ದರು. ಮಂಗಳವಾರ ರಾತ್ರಿ ಬಿಜೆಪಿ ಪ್ರಧಾನ ಕಚೇರಿಯಿಂದ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಲಾಗಿದೆ.
ತಾಪಸಿ ರಾಯ್ ಯಾರು?:ಧುಪ್ಗುರಿ ಉಪಚುನಾವಣೆಗೆಬಿಜೆಪಿ ಅಭ್ಯರ್ಥಿಯಾಗಿರುವ ತಾಪಸಿ ರಾಯ್ ಹುತಾತ್ಮ ಯೋಧ ಜಗನ್ನಾಥ್ ರಾಯ್ ಅವರ ಪತ್ನಿ. ಇವರು ಧುಪ್ಗುರಿ ವಿಧಾನಸಭಾ ಕ್ಷೇತ್ರದ ಪಶ್ಚಿಮ ಶಾಲ್ಬರಿ ನಿವಾಸಿ. ಸಿಆರ್‌ಪಿಎಫ್‌ನ 73ನೇ ಬೆಟಾಲಿಯನ್‌ನ ಯೋಧರಾಗಿದ್ದ ಜಗನ್ನಾಥ್ ರಾಯ್, 2021ರ ಮಾರ್ಚ್ 25ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.
ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಲಷ್ಕರ್-ಎ-ತೊಯ್ಬಾ ಉಗ್ರರ ದಾಳಿ ಮಾಡಿದ್ದರು. ಇದರಿಂದ ಯೋಧ ಜಗನ್ನಾಥ್ ರಾಯ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಕೊನೆಯುಸಿರೆಳೆದಿದ್ದರು. ಉಪಚನಾವಣೆಗೆ ಬಿಜೆಪಿ ಪಾಳಯದಿಂದ ಹಲವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಇದರಲ್ಲಿ ದಿ. ಬಿಷ್ಣುಪದ ರಾಯ್ ಅವರ ಪುತ್ರರು ಹೆಸರೂ ಕೇಳಿ ಬಂದಿತ್ತು. ಕೊನೆಗೆ ಬಿಜೆಪಿಯು ಹುತಾತ್ಮ ಯೋಧನ ಪತ್ನಿ ತಾಪಸಿ ಯಾರ್ ಅವರನ್ನು ಕಣಕ್ಕಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ತಾಪಸಿ ರಾಯ್, ''ರಾಜ್ಯ ಮತ್ತು ದೇಶಕ್ಕಾಗಿ ದುಡಿಯುವ ಆಸೆಯಿದೆ. ನಾನು ಆಯ್ಕೆಯಾದರೆ ಧುಪ್ಗುರಿ ಕ್ಷೇತ್ರದ ಮಹಿಳೆಯರು ಹಾಗೂ ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತೇನೆ. ಜೊತೆಗೆ ಗ್ರಾಮೀಣದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ" ಎಂದು ತಿಳಿಸಿದ್ದಾರೆ. ಈಗಾಗಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಇದನ್ನೂ ಓದಿ:Rahul Gandhi: ಅಕ್ಟೋಬರ್ನಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ 2.0: ಗುಜರಾತ್ TO ಮೇಘಾಲಯ ಪಾದಯಾತ್ರೆ