ಲೆಪ್ಚಾಖಾ(ಪಶ್ಚಿಮ ಬಂಗಾಳ):ಮನುಷ್ಯನ ಶವವನ್ನು ಕೆಲವರು ಸುಟ್ಟರೆ, ಕೆಲವರು ಹೂಳುತ್ತಾರೆ. ಅಷ್ಟೇ ಅಲ್ಲ, ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಎತ್ತರದ ಗೋಪುರಗಳ ಮೇಲಿಡುವ ಸಂಪ್ರದಾಯವೂ ಕೆಲವು ಸಮುದಾಯಗಳಲ್ಲಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿರುವ ಒಂದು ಬುಡಕಟ್ಟು ಜನಾಂಗದವರ ಶವಸಂಸ್ಕಾರದ ರೀತಿನೀತಿಗಳು ಅಚ್ಚರಿಯ ಜೊತೆಗೆ ವಿಶೇಷವಾಗಿಯೂ ಇದೆ.
ಇಂಡೋ-ಭೂತಾನ್ ಗಡಿಯ ಹಿಮಾಲಯದ ತಪ್ಪಲಿನಲ್ಲಿರುವ ಪುಟ್ಟ ಹಳ್ಳಿ ಲೆಪ್ಚಾಖಾದ ಡುಕ್ಪಾ ಸಮುದಾಯದಲ್ಲಿ ಶವಸಂಸ್ಕಾರ ವಿಶೇಷವಾಗಿದೆ. ಟಿಬೆಟಿಯನ್ ಬೌದ್ಧಧರ್ಮವನ್ನು ಅನುಸರಿಸುವ ಈ ಸಣ್ಣ ಬುಡಕಟ್ಟು ಸಮುದಾಯ ವ್ಯಕ್ತಿ ಸತ್ತ ಎಷ್ಟೋ ದಿನಗಳ ನಂತರ ಶವ ಸಂಸ್ಕಾರ ಮಾಡುತ್ತಾರೆ. ಈ ಪುಟ್ಟ ಜನಾಂಗದಲ್ಲಿ ಕೇವಲ 2,000 ಜನಸಂಖ್ಯೆಯಿದ್ದು, ಅಳಿವಿನಂಚಿನಲ್ಲಿದೆ. ಈ ಸಮುದಾಯದವರಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆ ನಡೆಸಬೇಕಾದರೆ ಭೂತಾನ್ನಲ್ಲಿ ವಾಸಿಸುವ ಬೌದ್ಧ ಲಾಮಾಗಳು ಸೂಚನೆಗೆ ಕಾಯಬೇಕು. ಎಲ್ಲಿಯವರೆಗೆಂದರೆ ಗ್ರಾಮದ ಜನರು ದೇಹವನ್ನು ಸುಡಲು ಅನುಮತಿಗಾಗಿ ಕೆಲವು ದಿನಗಳು ಅಥವಾ ವಾರಗಳವರೆಗೂ ಕಾಯಬೇಕಾಗಿ ಬರಬಹುದು.
ಮನೆ ಗೋಡೆಯನ್ನೇ ಒಡೆಯುತ್ತಾರಂತೆ: 'ನಾವು ಶವಗಳನ್ನು ಕೋಣೆಯೊಳಗಿಟ್ಟು, ಲಾಮಾಗಳ ಸೂಚನೆಗಾಗಿ ಕಾಯಬೇಕು. ಸೂಚನೆ ಬಂದ ನಂತರ ಶವವನ್ನು ಮನೆಯಿಂದ ಹೊರತರುತ್ತೇವೆ. ಒಂದು ವೇಳೆ ಅವರು ಹೇಳಿರುವ ದಿಕ್ಕಿನಲ್ಲಿ ಮನೆಯ ಯಾವುದೇ ಬಾಗಿಲು ಇಲ್ಲದಿದ್ದರೆ ನಾವು ಗೋಡೆಯನ್ನು ಒಡೆದು ಶವವನ್ನು ಅಂತ್ಯಕ್ರಿಯೆಗೆ ತೆಗೆದುಕೊಳ್ಳಬೇಕು' ಎಂದು ಹೇಳುತ್ತಾರೆ ಲೆಪ್ಚಾಖಾ ಗ್ರಾಮದ ನಿವಾಸಿ ಇಂದಜನ್ ಡುಕ್ಪಾ.
ಮನೆ ಸುಡುವ ಪ್ರಸಂಗವೂ ಬರಬಹುದು: 'ಕೆಲವು ಬಾರಿ ಸತ್ತವರ ಶಕುನದ ಪ್ರಭಾವದಿಂದ ಗ್ರಾಮಸ್ಥರು ಮನೆಯನ್ನು ಸುಟ್ಟು ಹಾಕಿರುವ ನಿದರ್ಶನಗಳೂ ಇವೆ. ನಾವು ಗೋಡೆಯನ್ನು ಒಡೆದು ಶವವನ್ನು ಹೊರ ತೆಗೆದುಕೊಂಡು ಹೋದ ಅನೇಕ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ಮನೆಯನ್ನು ಸುಟ್ಟುಹಾಕಿರುವ ಉದಾಹರಣೆಗಳಿಲ್ಲ. ಸುಮಾರು 10 ವರ್ಷಗಳ ಹಿಂದೆ ಕಿಟಿನ್ ಡುಕ್ಪಾ ಎಂಬವರು ನಿಧನರಾದಾಗ ಮನೆ ಸುಡುವಂತೆ ಲಾಮಾಗಳು ನಮಗೆ ಸೂಚಿಸಿದ್ದರು. ನಾವು ಹಾಗೇ ಮಾಡಬೇಕಾಯಿತು' ಎನ್ನುತ್ತಾರೆ ಇನ್ನೊಬ್ಬ ನಿವಾಸಿ ಜಾಯ್ ಡುಕ್ಪಾ.
'ಮೃತದೇಹವನ್ನು ಮನೆಯೊಳಗೆ ಒಬ್ಬಂಟಿಯಾಗಿ ಇಡಬಾರದು. ಆ ದೇಹವನ್ನು ಸುಡುವವರೆಗೂ ಒಬ್ಬ ವ್ಯಕ್ತಿಯಾದರೂ ಅದರ ಹತ್ತಿರವೇ ಇರಲೇಬೇಕು. ಮೂಗಿನ ಹೊಳ್ಳೆಗಳು, ಕಿವಿ ರಂಧ್ರಗಳು, ಬಾಯಿ ಮತ್ತು ವ್ಯಕ್ತಿಯ ದೇಹದ ಎಲ್ಲಾ ರಂಧ್ರಗಳಿಗೆ ತುಪ್ಪ ತುಂಬಿಸಬೇಕು. ಸೂಚನೆ ಬಂದ ಕೂಡಲೇ ನಾವು ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತೇವೆ' ಎಂದು ಜಾಯ್ ತಿಳಿಸಿದರು.