ಕೋಲ್ಕತ್ತಾ(ಪಶ್ಚಿಮ ಬಂಗಾಳ):ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ದುಷ್ಕರ್ಮಿಗಳು ಮೂರು ಕಚ್ಚಾ ಬಾಂಬ್ ಎಸೆದಿದ್ದಾರೆ. ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಸಂಸದರ ಮನೆಯ ಗೇಟ್ ಸಂಪೂರ್ಣ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಂತಹ ಘಟನೆಗಳು ನಡೆಯುತ್ತಿದ್ದು, ಕೆಲ ಕಾರ್ಯಕರ್ತರ ನಿವಾಸದ ಮೇಲೆ ಬಾಂಬ್ ದಾಳಿ ಸಹ ನಡೆದಿರುವುದಾಗಿ ವರದಿಯಾಗಿವೆ. ಇದರ ಬೆನ್ನಲ್ಲೇ ಇದೀಗ ಸಂಸದರ ಮನೆ ಮೇಲೂ ಇಂತಹ ದಾಳಿಯಾಗಿದೆ.
ಭಟ್ಟಪರಾದಲ್ಲಿರುವ ಸಂಸದರ ನಿವಾಸದ ಮೇಲೆ ಇಂದು ಬೆಳಗ್ಗೆ 6:30ರ ವೇಳೆ ಮೂರು ಕಚ್ಚಾ ಬಾಂಬ್ ಎಸೆಯಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂಸದ ಅರ್ಜುನ್ ಸಿಂಗ್ ಸದ್ಯ ದೆಹಲಿಯಲ್ಲಿದ್ದು, ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಬಾಂಬ್ ಸ್ಪೋಟಗೊಳ್ಳುತ್ತಿದ್ದಂತೆ ಮನೆಯ ಸುತ್ತಮುತ್ತ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ವರದಿಯಾಗಿದೆ.