ಕೋಲ್ಕತಾ:ಕೆಲವು ಕಾನೂನಿನ ಅಡತಡೆ ಹಾಗೂ ನ್ಯೂನತೆಗಳಿಂದಾಗಿ ತೃಣಮೂಲ ಕಾಂಗ್ರೆಸ್ ಶಾಸಕ ಸುವೇಂದು ಅಧಿಕಾರಿಯ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.
ಅವರ ರಾಜೀನಾಮೆಯನ್ನು ಅಂಗೀಕರಿಸುವವರೆಗೂ ಅಧಿಕಾರಿಯು ತೃಣಮೂಲ ಶಾಸಕರಾಗಿ ಉಳಿಯುತ್ತಾರೆ. ರಾಜೀನಾಮೆಗೂ ಕೆಲವು ಕಾನೂನು ಕಟ್ಟುಪಾಡುಗಳಿವೆ. ಹೀಗೆ ಸಲ್ಲಿಸಬೇಕೆಂಬ ಸಂವಿಧಾನದ ನಿಬಂಧನೆಗಳಿವೆ. ಹಾಗಾಗಿ ಕೆಲವು ನ್ಯೂನತೆಗಳಿಂದಾಗಿ ಸುವೇಂದು ಅಧಿಕಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಸ್ಪೀಕರ್ ಬಿಮನ್ ಬ್ಯಾನರ್ಜಿ ಕೆಲವು ಕಾರಣಗಳನ್ನು ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಜೀನಾಮೆಯಲ್ಲಿ ದಿನಾಂಕವನ್ನು ಸ್ಪಷ್ಟಪಡಿಸಲಾಗಿಲ್ಲ. ಹಾಗಾಗಿ ರಾಜೀನಾಮೆ ಅಂಗೀಕಾರ ಆಗುವವರಿಗೂ ಅವರು ತೃಣಮೂಲ ಶಾಸಕರಾಗಿ ಉಳಿಯುತ್ತಾರೆ ಎಂದಿದ್ದಾರೆ. ಇದೇ ವೇಳೆ ಡಿಸೆಂಬರ್ 21 ರಂದು ನಡೆಯುವ ಅಧಿವೇಶಕ್ಕೆ ಹಾಜರಾಗುವಂತೆಯೂ ಸ್ಪೀಕರ್ ಅಧಿಕಾರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.