ಮಾಲ್ಡಾ (ಪಶ್ಚಿಮ ಬಂಗಾಳ):ಬಿಪರ್ಜೊಯ್ ಅಬ್ಬರ ಮುಗಿತು ಈಗ ಗುಡುಗು ಸಿಡಿಲಿನ ಅಬ್ಬರ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದಲ್ಲಿ ಸಿಡಿಲು- ಗುಡುಗು ಹಾಗೂ ಮಿಂಚಿಗೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ.
ಸಿಡಿಲು ಬಡಿದು 7 ಜನರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿರುವ ಮಾಲ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಸಿಂಘಾನಿಯಾ, "ಮಾಲ್ಡಾವನ್ನು ಅಪ್ಪಳಿಸಿದ ಭಾರಿ ಗುಡುಗು ಸಹಿತ ಮಳೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೃತರನ್ನು ಕೃಷ್ಣೋ ಚೌಧರಿ (65), ಉಮ್ಮೆ ಕುಲ್ಸುಮ್ (6), ದೆಬೋಶ್ರೀ ಮಂಡಲ್ (27), ಸೋಮಿತ್ ಮಂಡಲ್ (10), ನಜ್ರುಲ್ ಎಸ್ಕೆ (32), ರಾಬಿಜಾನ್ ಬೀಬಿ (54), ಮತ್ತು ಇಸಾ ಸರ್ಕಾರ್ (ಎಂಟು) ಎಂದು ಗುರುತಿಸಲಾಗಿದೆ.
ಹಳೆ ಮಾಲ್ಡಾದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಉಳಿದ ಆರು ಜನರು ಕಾಲಿಯಾಚಕ್ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಒಟ್ಟು ಒಂಬತ್ತು ಜಾನುವಾರುಗಳು ಸಾವನ್ನಪ್ಪಿವೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.