ಮುಂಬೈ : ಮಹಾರಾಷ್ಟ್ರದಲ್ಲಿ ತೀವ್ರವಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ವಾರಾತ್ಯಂದ ದಿನಗಳಾದ ಪ್ರತಿ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ವಾರಾಂತ್ಯದ ಲಾಕ್ಡೌನ್ನೊಂದಿಗೆ ಸೋಮವಾರ ರಾತ್ರಿ 8 ರಿಂದ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಸೆಕ್ಷನ್ 144ರಡಿ ಹಗಲಿನಲ್ಲೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಸಂಪುಟ ಸಭೆಯ ನಂತರ ತಿಳಿಸಿದ್ದಾರೆ.
ನಿಷೇಧಾಜ್ಞೆ ಸಮಯದಲ್ಲಿ ಶಾಪಿಂಗ್ ಮಾಲ್, ಬಾರ್, ರೆಸ್ಟೋರೆಂಟ್, ಸಣ್ಣ ಅಂಗಡಿಗಳು, ಟೇಕ್-ಅವೇ ಮತ್ತು ಪಾರ್ಸೆಲ್ ಸೌಲಭ್ಯಗಳು ಮಾತ್ರ ತೆರೆದಿರುತ್ತವೆ. ಸರ್ಕಾರಿ ಕಚೇರಿಗಳು ಶೇ.50ರಷ್ಟು ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಮಲಿಕ್ ಹೇಳಿದ್ದಾರೆ.
ಓದಿ : ರಾಜ್ಯದಲ್ಲಿಂದು 4,553 ಹೊಸ ಸೋಂಕು: 15 ಮಂದಿ ಕೋವಿಡ್ ಗೆ ಬಲಿ
ಕೈಗಾರಿಕೆಗಳು, ಉತ್ಪಾದನಾ ವಲಯ, ತರಕಾರಿ ಮಾರುಕಟ್ಟೆಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ)ಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಕಾರ್ಮಿಕರಿಗೆ ವಸತಿ ಸೌಕರ್ಯವಿದ್ದರೆ ನಿರ್ಮಾಣ ಕಾರ್ಯಗಳು ನಡೆಯಲಿವೆ. ಚಿತ್ರ ಮಂದಿರ, ಉದ್ಯಾನವನಗಳು ಮತ್ತು ಆಟದ ಮೈದಾನಗಳು ಬಂದ್ ಆಗಲಿವೆ.
ಜನಸಂದಣಿ ಇಲ್ಲದಿದ್ದರೆ ಚಲನಚಿತ್ರ ಮತ್ತು ದೂರದರ್ಶನ ಚಿತ್ರೀಕರಣ ಮುಂದುವರಿಯುತ್ತದೆ. ಧಾರ್ಮಿಕ ಸ್ಥಳಗಳು ಎಸ್‌ಒಪಿಗಳನ್ನು ಅನುಸರಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ನಿಯಮ ಪಾಲನೆಯೊಂದಿಗೆ ಮುಂದುವರೆಯಲಿದೆ ಎಂದು ನವಾಬ್ ಮಲಿಕ್ ತಿಳಿಸಿದ್ದಾರೆ.
ವಿಮೆ, ಮೆಡಿಕ್ಲೇಮ್, ವಿದ್ಯುತ್ ಮತ್ತು ಇತರ ಅಗತ್ಯ ಸೇವೆಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ವರ್ಕ್ ಫ್ರಂ ಹೋಮ್ಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಅಸ್ಲಾಮ್ ಶೇಖ್ ಹೇಳಿದ್ದಾರೆ.