ಹೈದರಾಬಾದ್:ಇಲ್ಲಿನ ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡದ ಮುಸ್ಲಿಂ ದಂಪತಿ ಅನಾಥ ಬಾಲಕಿಯನ್ನು ಸಾಕಿ ಶಿಕ್ಷಣ ಕೊಡಿಸಿದ್ದಾರೆ. ಇದೀಗ ಹಿಂದೂ ಸಂಪ್ರದಾಯದಂತೆ ಅಕ್ಟೋಬರ್ 25 ರಂದು ಅವಳ ವಿವಾಹ ಕಾರ್ಯ ನಡೆಸಿಕೊಟ್ಟು ಮಾದರಿಯಾಗಿದ್ದಾರೆ.
ಬೋರ್ಲಾಂ ಗುರುಕುಲ ಶಾಲೆಯ ಮುಖ್ಯೋಪಾಧ್ಯಾಯಿನಿ ಇರ್ಫಾನಾ ಬಾನು ಮತ್ತು ಅವರ ಪತಿ ಹೈಮದ್ ಮಾನವೀಯತೆ ಮೆರೆದವರು. ಇರ್ಫಾನಾ ತಡವಾಯಿ ಗುರುಕುಲ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಲಿಂಗಪೇಟೆ ಮಂಡಲದ ಚಂದನಾ ಶೆಟ್ಪಲ್ಲಿ 6ನೇ ತರಗತಿಗೆ ಪ್ರವೇಶ ಪಡೆದಿದ್ದರು. ರಜೆಯಲ್ಲಿ ಶಾಲೆಯ ಮಕ್ಕಳು ತಮ್ಮ ಊರಿಗೆ ಹೋದರೂ ಚಂದನಾ ಮಾತ್ರ ಎಲ್ಲೂ ಹೋಗಲಿಲ್ಲ. ಇದನ್ನು ಗಮನಿಸಿದ ಇರ್ಫಾನಾ ಆಕೆಯನ್ನು ತಮ್ಮ ಮನೆಗೆ ಕರೆದೊಯ್ದು, ಶಾಲೆ ಪುನಾರಂಭವಾದಾಗ ವಾಪಸ್ ಕರೆತರುತ್ತಿದ್ದರು.
ಚಂದನಾ 10ನೇ ತರಗತಿವರೆಗೆ ಅದೇ ಶಾಲೆಯಲ್ಲಿ ಓದಿದ್ದಾಳೆ. ನಂತರ, ದಂಪತಿ ಅವಳನ್ನು ತಡ್ವಾಯಿಯಲ್ಲಿ ಇಂಟರ್ ಮೀಡಿಯೆಟ್‌ಗೆ ಸೇರಿಸಿದ್ದರು. ನಂತರ ನಿಜಾಮಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಚಂದನಾ ಅವರ ಡಿಎಂಎಲ್‌ಟಿ ಕೋರ್ಸ್‌ಗೆ 70,000 ರೂ ಶುಲ್ಕ ಕಟ್ಟಿ ಓದಿಸಿದ್ದಾರೆ. ಇದೀಗ ಯುವತಿಯನ್ನು ಬೊಮ್ಮನದೇವಪಲ್ಲಿ ಗ್ರಾಮದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟ್ ರಾಮ್ ರೆಡ್ಡಿ ಎಂಬಾತನ ಜೊತೆ ವಿವಾಹ ಮಾಡಿ ಕೊಟ್ಟಿದ್ದಾರೆ.